ಶುಕ್ರವಾರ, ಮಾರ್ಚ್ 7, 2014

ಮೂಗುತಿ ಸುಂದರಿ


ಭಾಗ- ಒಂದು




ಸಂಜೆ ಘಂಟೆ ಏಳಾದರೂ ರವಿಯ ಪತ್ತೆಯೇ ಇಲ್ಲದಾಗ ಕವಿತಾಳ ಕಣ್ಣು ಪದೇ ಪದೇ ಕಿಟಕಿಯಿಂದಾಚೆ ಇಣುಕಲು ಶುರುಮಾಡಿತ್ತು. WhatsApp ನಲ್ಲಿ ಮೆಸೇಜ್ ಕಳಿಸಿದ್ರೂ ರಿಪ್ಲೈ ಇಲ್ಲ.  ಚಡಪಡಿಸಿತ್ತು ಮನಸು. ಆಗಲೇ ಹಾರ್ನ್ ಸದ್ದಾಗಿದ್ದು. ಕವನ ಬರೆದಿದ್ದ ಎರಡು ಹಾಳೆಗಳನ್ನೂ ಎತ್ತಿಕೊಂಡು ಸಂಭ್ರಮದಿಂದ ರಸ್ತೆಯೆಡೆಗೆ ಓಡಿದ್ದಳು ಕವಿತಾ.
ಏ ಇರೇ... ನಾನೂ ಬತ್ತಿ , ನಂಗೂ ರವಿ ಹತ್ರಾ ಮಾತಾಡದಿದ್ದು ಸ್ವಲ್ಪ...." ವೈಶಾಲಿ ಆಲೋವೇರ ಕ್ರೀಮ್ ಹಿಚ್ಚಿಕೊಳ್ಳುತ್ತಲೇ ಕೂಗಿದ್ದಳು.
ಅಲ್ಲಿ ನಿಂಗೆ ಎಂತ ಮಾತಾಡದಿರ್ತೆ ಅವನಹತ್ರೆ ....ಮೆಟ್ಟಿಲ ತುದಿಯಿಂದಲೇ ಕೂಗಿ ಹೇಳಿದ್ದಳು ಕವಿತಾ.
ಕೃಷ್ಣ ಬಂದಿರುವನೆಂದು ತಿಳಿದರೂ ರಾಧೆ ಗೆಳತಿಗಾಗಿ ಕಾಯುವಳೇ ...?? ಕವಿತಾ ರಸ್ತೆ ತಲುಪಿಯಾಗಿತ್ತು.
ಅಂತೂ ಬಂದ್ಯಲಿ , ಇಷ್ಟು ಹೊತ್ತು ಎಂತಕ್ಕಾತು.. ? ಎಲ್ಲಿಗೆ ಹೋಗಿದ್ದೆ..? whatsapp ಅಲ್ಲಿ ಎಂತಕ್ಕೆ ರಿಪ್ಲೈ ಮಾಡಿದ್ದಿಲ್ಲೆ ?” ಒಂದೇ ಉಸಿರಿನಲ್ಲಿ ಹತ್ತು ಪ್ರಶ್ನೆಗಳನ್ನು ಕೇಳಿದ್ದ ಕವಿತಾಳಿಗೆ ರವಿಯಿಂದ ಬಂದಿದ್ದು ಒಂದೇ ಉತ್ತರ
ಹಳೆ ಸ್ಕೂಲ್ ಫ್ರೆಂಡ್ ಸಿಕ್ಕಿದಿದ್ದ , ಮಾತಾಡ್ತಾ ಇದ್ದಿದ್ವಾಪಾ .. ಅದನ್ನೂ ನಿಂಗೆ ಹೇಳವನು ಈಗಾ..
ಬ್ಯಾಡದೋ ನಂಗೆ ಎಂತು ಹೇಳದು ಬ್ಯಾಡ ನೀನು... ನಾ ಎಂತ ಆಗವ ನಿಂಗೆ ?
ಥೋ ಹಂಗಲ್ಲದೆ ಮಾರಾಯ್ತಿ... ಅಷ್ಟಕ್ಕೆಲ್ಲ ಬೇಜಾರು ಮಾಡ್ಕ್ಯಳಡಾ ನೀನು... ತಗ ಡೈರಿ ಮಿಲ್ಕ್ ತಿನ್ನು... ಹಿಡಿ"
ಮುನಿಸಿಕೊಂಡ ಕವಿತಾಳನ್ನು ಸಮಾಧಾನ ಮಾಡುವುದು ರವಿಗೇನು ಹೊಸತಲ್ಲ.

ಕವಿತಾ, ವೈಶಾಲಿ, ರವಿ ಎಲ್ಲರೂ ಒಂದೇ ಊರಿನವರಾದ್ದರಿಂದ ಮೊದಲಿನಿಂದಲೂ ಸ್ನೇಹಿತರು. ಎಲ್ಲರೂ ಎಮ್ ಎಮ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲೇ ಓದುತ್ತಿದ್ದರೂ ವೈಶಾಲಿ  ಮತ್ತು ಕವಿತಾ ಫಸ್ಟ್ ಇಯರ್ ಬಿಎ  ಮತ್ತು ರವಿ ಫೈನಲ್  ಇಯರ್ ಬಿ‌ಎಸ್‌ಸಿ ವಿಧ್ಯಾರ್ಥಿಗಳಾಗಿದ್ದರು. ಕವಿತಾ ಮತ್ತು ವೈಶಾಲಿ ಶಿರಸಿಯಲ್ಲಿ ಆದರ್ಶನಗರದಲ್ಲೇ ರೂಂ ಮಾಡಿಕೊಂಡಿದ್ದರು. ಕವಿತಾ ಹೈ ಸ್ಕೂಲ್ ನಿಂದಲೂ ಕವನ ಬೆರೆಯುದಕ್ಕೆ ಫೇಮಸ್ ಆಗಿದ್ದವಳು. ರವಿಯ ಸ್ನೇಹಿತನೊಬ್ಬ ಸುಧಾ ವಾರಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸುದ್ದಿ ತಿಳಿದು , ಹಠ ಹಿಡಿದು ಕವಿತಾಳ ಕವನಗಳನ್ನು ಸುಧಾ ಸಂಪಾದಕರಿಗೆ ಕಳುಹಿಸಿ , ಈಗ ಪ್ರತಿವಾರ ಕವಿತಾಳ ಕವನಗಳನ್ನು ಸುಧಾದಲ್ಲಿ ಪ್ರಕಟಿಸುವಂತೆ ಮಾಡಿದ್ದು ರವಿಯೇ. ಹಾಗಾಗಿ ರವಿ ಅಂದರೆ ಕವಿತಾಳಿಗೆ ಅದೇನೋ ಒಂದು ನೂರು ಗ್ರಾಂ ಹೆಚ್ಚು ಸಲುಗೆ. ಒಳಗೊಳಗೇ ಸಣ್ಣ ಪ್ರೀತಿ.

 ಪ್ರತಿ ಗುರುವಾರ ಕವಿತಾಳ ಕವನಗಳನ್ನು ಪತ್ರಿಕೆಗೆ ತೆಗೆದುಕೊಂಡು ಹೋಗಲು ರವಿಯೇ ಬರುತ್ತಿದ್ದ. ಇಷ್ಟೆಲ್ಲ ಸೇವೆಗೆ ಕಾರಣ ಕವಿತಾಳ ಉದ್ದ ಜಡೆಯ, ಅಷ್ಟೇನೂ ಬೆಳ್ಳಗಿಲ್ಲದ ಮೂಗುತಿ ಸುಂದರಿ ವೈಶಾಲಿ. ವೈಶಾಲಿಯನ್ನು ಕಂಡರೆ ರವಿಗೆ ಮೊದಲಿನಿಂದಲೂ ಒಲವು. ಒಂದು ದಿನ facebook ನಲ್ಲಿ ಚಾಟ್ ಮಾಡುತ್ತಿರುವಾಗ ರವಿಯೇ ಮುಂದಾಗಿ
ಐ ಲೈಕ್ ಯುವರ್ ಸ್ಮೈ ಲ್  ಅಂತ ಕಲಿಸಿದ್ದಕ್ಕೆ ಥ್ಯಾಂಕ್ಯು ಅಂತ ಉತ್ತರ ಬಂದಿತ್ತು. ನಂತರ ಐ ಲೈಕ್ ಯು ಅಂತ ಕಳಿಸಿದ್ದಕ್ಕೆ ಅರ್ಥ ಆಗಿಲ್ಲ "  ಎಂಬ ಉತ್ತರ ಬಂದಾಗ ಇದ್ದೆಲ್ಲಾ ಧೈರ್ಯವನ್ನು ಒಟ್ಟುಗೂಡಿಸಿ ಐ ಲವ್ ಯು ಕಣೆ , ನಾನು ನಿನ್ನ ಪ್ರೀತಿಸ್ತಾ ಇದ್ದಿ " ಎಂದು ಕಳಿಸೇ ಬಿಟ್ಟ. ನಂತರ ಅವಳು ರವಿಯನ್ನು block ಮಾಡಿಬಿಟ್ಟಳು.
ಇಷ್ಟಕ್ಕೆಲ್ಲಾ ಸೋಲುವ ಜಾಯಮಾನವೇ ಅಲ್ಲ ರವಿಯದ್ದು. ಕವನ ತರಲು ಹೋದಾಗೆಲ್ಲ ಲೈನ್ ಹೊಡೆಯುತ್ತ ವೈಶಾಲಿಯನ್ನು ಮಾತಾಡಿಸಿಯೇ ಬರುತ್ತಿದ್ದ.
ಈ ಡ್ರೆಸ್ ಚಂದಿದ್ದಲೇ , ನಿಂಗೆ ರಾಶಿ ಸೂಟ್ ಆಗ್ತು ...
ಆ ಪರ್ಸ್ ಯಾವಾಗ ತಗಂಡ್ಯೆ ... ಜೋರಲೇ ...
ವೈಶಾಲಿಯನ್ನು ಹೊಗಳುವ ಯಾವ ಅವಕಾಶವನ್ನೂ ರವಿ ವ್ಯರ್ಥ ಮಾಡುತ್ತಿರಲಿಲ್ಲ. ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿ ಅನ್ನೋ ರವಿಯ ಪ್ರೀತಿಗೆ ವೈಶಾಲಿ ಮಣಿಯಲೇ ಬೇಕಾಯಿತು. ಮೊದಲು ಕವನ ತೆಗೆದುಕೊಂಡು ಹೋಗಲು ಬಂದಾಗ ವೈಶಾಲಿಯನ್ನು ಮಾತನಾಡಿಸುತ್ತಿದ್ದವನು ಈಗ ಅವಳ ಜೊತೆ ಮಾತನಾಡಲು ಹೋದಾಗ ಕವನ ತೆಗೆದುಕೊಂಡು ಬರುತ್ತಿದ್ದ.

ಇವರಿಬ್ಬರ ಮಧ್ಯೆ ಇಷ್ಟೆಲ್ಲ ನಡೆದರೂ ಕವಿತಾಳಿಗೆ ಏನೂ ಗೊತ್ತಿರಲಿಲ್ಲ. ವೈಶಾಲಿ ಯಾರದ್ದೋ ಜೊತೆ ಇಡೀ ದಿನ ಚಾಟ್ ಮಾಡುತ್ತಿರುತ್ತಾಳೆಂದು ತಿಳಿದಿದ್ದರೂ ಯಾರೆಂದು ಕೇಳುವ ಗೋಜಿಗೆ ಹೋಗಿರಲಿಲ್ಲ. ಹೀಗಿರುವಾಗ ಕವಿತಾಳಿಗೆ ಮನೆಯಲ್ಲಿ ತನ್ನ ಮದುವೆಗೆ ಸಂಬಂಧ ಹುಡುಕುತ್ತಿದ್ದಾರೆಂಬ ವಿಷಯ ತಿಳಿಯಿತು.
ಕೂಸಿಗೆಂತಾ ಇಪ್ಪತ್ತೆರಡು ವರ್ಷ ಆತು ... ಇನ್ನೂ ಮದುವೆ ಮಾಡದೆ ಮನೇಲಿ ಇಟ್ಕಂಬಲ್ಲೆ ಬತ್ತನೇ ಅಜ್ಜಿ ಫರ್ಮಾನು ಹೊರಡಿಸಿದ್ದರು.
“”ಕೊಡ್ಲಾಗದ್ದೆ ರಾಮಚಂದ್ರನ ಮಗಾ ಎಂಜಿನಿಯರ್ ಅಡಾ. ಎಚ್‌ಪಿ ಕಂಪನಿಲಿ  ಕೆಲ್ಸ ಮಾಡ್ತಾ ಇದ್ದನಡಾ . ಒಳ್ಳೆ ಜನ ಬೇರೆಯಾ. ಜಾತಗಾ ಬೇರೆ ಇಪ್ಪತ್ನಾಲಕ್ಕು ಗುಣ ಹೊಂದತಡಾ , ದಣೀ ಪುರೋಹಿತ ಭಟ್ಟರ ಹತ್ರಾ ಜಾತಗಾ ತೋರ್ಸ್ಯ ಬಂಜಿ." ಕವಿತಾಳ ತಂದೆ ಆಗಷ್ಟೇ ಫೋನ್ ಮಾಡಿ ವಿಷಯ ತಿಳಿಸಿದ್ದರು.
ಕವಿತಾಳಿಗೆ ಈಗ ಉಭಯ ಸಂಕಟ. ರವಿ ತನ್ನನು ಪ್ರೀತಿಸುತ್ತಾನೋ ಇಲ್ಲವೋ ಅನ್ನುವುದೇ ಗೊತ್ತಿಲ್ಲ. ಅವನ ಹತ್ತಿರ ತಾನೇ ಹೋಗಿ ಹೇಳಿಕೊಳ್ಳಲೇ ...ಚಡಪಡಿಸುತ್ತಿತ್ತು ಮನಸು. ಕೂತಲ್ಲಿ ಕೂರಲಾಗುತ್ತಿರಲಿಲ್ಲ. ಏನಾದ್ರೂ ಆಗ್ಲಿ ಮೊದಲು ವೈಶಾಲಿಗೆ ಎಲ್ಲ ವಿಷಯ ಹೇಳಿಬಿಡೋಣ ಎಂದು ಮನಸು ಗಟ್ಟಿಮಾಡಿಕೊಂಡಳು.
                                                                              (ಸಶೇಷ....)
                                                                                                                
ಮೂಗುತಿ ಸುಂದರಿ ಭಾಗ - 2 ಇಲ್ಲಿದೆ http://vasukihegde.blogspot.in/2014/03/2.html

7 ಕಾಮೆಂಟ್‌ಗಳು:

  1. ಹ್ಞ...... ಕಡಿಗೆ?...

    (ನಂಬದಿ ಮೂರ್ಮುಖ ಪ್ರೇಮಕಥೆ ...ಪ್ರೇಮದಲ್ಲಿ ಸಸ್ಪೆನ್ಸ್... ಚೋಲೊ ಇದ್ದು.. ಮುಂದ್ವರ್ಸೋ...)

    ಪ್ರತ್ಯುತ್ತರಅಳಿಸಿ