ಭಾನುವಾರ, ಮಾರ್ಚ್ 30, 2014

ಹಣ್ಣು-ಹಣ್ಣು ಮುದುಕಿ







ಅರವತ್ತೆರಡು ವರ್ಷದ ವೆಂಕಮ್ಮ ರಸ್ತೆಯಲ್ಲಿ ನಿಧಾನವಾಗಿ ನಡೆದು ಬರುತ್ತಿದ್ದರೆ , ಅದು ಹೆಗಡೇರ ಮನೆಗೇ ಎಂದು ಎಲ್ಲರಿಗೂ ಗೊತ್ತಿತ್ತು. ಬೆನ್ನು ಗೂನಾಗಿ , ಕಣ್ಣು ಮಂಜಾದರೂ ಉತ್ಸಾಹವೇನು ಕುಂದಿರಲಿಲ್ಲ. ಹೆಗಡೇರ ಮನೆ ಕೆಲಸವೆಂದರೆ ಯಾವಾಗಲೂ ರೆಡಿ.
ಆಗ ಹೆಗಡೇರ ಮನೆಯಲ್ಲಿ ಸಂಭ್ರಮದ ವಾತಾವರಣ. ಗಜಾನನ ಹೆಗಡೇರ ಮೊಮ್ಮಗಳು ವಿಲಾಸಿನಿಗೆ ಹೆಣ್ಣುಮಗುವಾಗಿತ್ತು. ಮನೆಗೆ ಮಹಾಲಕ್ಷ್ಮಿಯೇ ಬಂದಿದ್ದಾಳೆಂಬುದು ಗಜಾನನ ಹೆಗಡೇರ ಅಂಬೋಣ. ಮಗುವನ್ನು ಎತ್ತಿ ಆಡಿಸುವ ವಯಸಲ್ಲದಿದ್ದರೂ ಸಾಯುವುದಕ್ಕಿಂತ ಮೊದಲು ಮಿಮ್ಮಗಳನ್ನು ನೋಡಿದ ಖುಷಿ ಅವರಿಗಿತ್ತು. ಆಗ ಜೂಲೈ ತಿಂಗಳು ಬೇರೆ. ಮಳೆಯೂ ಸಾಕಷ್ಟು ಬಿದ್ದಿತ್ತು. ಗದ್ದೆ ನೆಟ್ಟಿಯ ಸಮಯವದು. ಭತ್ತದ ಗದ್ದೆಗೆ ಮಳೆಯ ನೀರೇ ಆಧಾರವಾದ್ದರಿಂದ ಮಳೆ ಬಂದಾಗಲೇ ಗದ್ದೆ ಹೂಟಿ ಮಾಡಿ ಸಸಿ ನೆಡಬೇಕಾದ ಅನಿವಾರ್ಯತೆಯಿತ್ತು. ಹೀಗಾಗಿ ಆ ಸಮಯದಲ್ಲಿ ಮನೆಗೆಲಸಕ್ಕೆಂದು ಹೆಣ್ಣಾಳುಗಳು ಸಿಗುವುದು ಕಷ್ಟಸಾಧ್ಯವೇ. ಆದರೆ ಕೆಲಸದ ಆಳಿಲ್ಲದೇ ವಿಲಾಸಿನಿಯ ಬಾಳಂತನ  ಮಾಡುವುದೇನು ಸುಲಭದ ಮಾತಾಗಿರಲಿಲ್ಲ. ತಾಯಿಯಿಲ್ಲದ ಮಗಳು ವಿಲಾಸಿನಿ. ವಿಲಾಸಿನಿ ಚಿಕ್ಕವಳಿದ್ದಾಗಲೇ ತಾಯಿ ತೀರಿಕೊಂಡಿದ್ದರು. ಈಗ ಬಾಳಂತನ ಮಾಡುವ ಜವಾಬ್ದಾರಿಯೆಲ್ಲಾ ಅಜ್ಜಿ ಗಂಗಮ್ಮನ ಮೇಲಿತ್ತು. ಗಂಗಮ್ಮಳೇನು ಕಡಿಮೆ ಸಾಮಾನ್ಯದ ಹೆಣ್ಣಲ್ಲ. ಮಕ್ಕಳು ಮೊಮ್ಮಕ್ಕಳದ್ದೆಲ್ಲ ಸೇರಿ ಸುಮಾರು ಹದಿನೈದು ಬಾಳಂತನ ಮಾಡಿದ ಅನುಭವವಿತ್ತು. ಊರಿನ ನರ್ಸ್ ಬಾಯಿಯ ಜೊತೆ ಸೇರಿ ಐದಾರು ಹೆರಿಗೆ ಕೂಡ ಮಾಡಿಸಿದ್ದ ಗಡಸುಗಿತ್ತಿ ಅವಳು. ಆದರೆ ವಯಸ್ಸೆಂಬುದು ನಿಲ್ಲಬೇಕಲ್ಲ. ಗಂಗಮ್ಮನಿಗೂ ಈಗ ಅರವತ್ತಾಗಿತ್ತು. ಬಾಳಂತನವೆಂದರೇನು ಸಾಮಾನ್ಯದ ಕೆಲಸವೇ, ತಾಯಿ-ಮಗುವನ್ನು ಮೀಯಿಸಿ , ಅವರ ಬಟ್ಟೆ ತೊಳೆದು, ಬಾಳಂತಿಯ ಔಷಧಿಗಳನ್ನು ಮಾಡಿಕೊಟ್ಟು ಆರೈಕೆ ಮಾಡುವಷ್ಟರಲ್ಲಿ ಕೈಕಾಲು ಬಿದ್ದು ಹೋಗುತ್ತಿತ್ತು.
ಆಗ ಗಂಗಮ್ಮನಿಗೆ ನೆನಪಾದದ್ದೇ ವೆಂಕಮ್ಮ. ವಿಲಾಸಿನಿ ಹುಟ್ಟಿದಾಗಲೂ ವೆಂಕಮ್ಮನೇ ಅಲ್ಲವೇ ನೆರವಾದದ್ದು. ಈಗಲೂ ಹಾಗೋ ಹೀಗೋ ಬಂದು ನೆರವಾಗುತ್ತಾರೆಂದು ವೆಂಕಮ್ಮನನ್ನು ಬರಹೇಳಿದ್ದರು.
“ಅಮ್ಮಾ ಈ ಮುದಿ ಜೀವದ ನೆನಪು ಈಗಾದ್ರೂ ಆಯ್ತಲ್ವ್ರಾ... ವಿಲಾಸಿನಿ ಅಮ್ಮೋರು- ಮಗಿ ಎಲ್ಲ ಹುಷಾರಾಗಿದ್ರ್ಯಾ.. ಎಂತ ಹೇಳಿ ಬಪ್ಪುಕೆ ಹೇಳಿದ್ರಂತೆ.... “
“ವೆಂಕಮ್ಮ ನೀನೆ ಅಲ್ವನೆ ಇಂತಾ ಕಾಲದಲ್ಲಿ ನೆನಪಾಗುದು, ವಿಲಾಸಿನಿ ಬಾಳಂತನ ಮಾಡುಕೆ ನನ್ನ ಒಬ್ನಹತ್ರೆ ಸಾಧ್ಯ ಇಲ್ಲೇ , ದಿವಸಾ ಬಂದು ತಾಯಿ ಮಗಿನ ಬಟ್ಟೆ ತೊಳದು , ಅವರ್ನ ಮೀಸುಲ್ಲೆ ಸಹಾಯ ಮಾಡಿದ್ರೆ ನಿನ್ನಿಂದ ದೊಡ್ಡ ಉಪಕಾರ ಆಗ್ತಿತ್ತು ಮಾರಾಯ್ತಿ. ಈ ವಯಸ್ಸಲ್ಲಿ ಹೇಳಲಿಕ್ಕೆ ಬಾಯಿ ಬರ್ಲಿಲ್ಲ ಆದ್ರೆ ಬೇರೆ ಉಪಾಯ ಇಲ್ಲ, ಎಂತ ಮಾಡುದು ಹೇಳು.. ಈ ಸುಟ್ಟ ಗದ್ದೆ ನೆಟ್ಟಿ ಕಾಲದಲ್ಲಿ ಯಾರೂ ಸಿಗದೆ ನಿನ್ನ ಕರೆಯೊ ಪರಿಸ್ಥಿತಿ ಬಂತು “ ಗಂಗಮ್ಮ ಮರುಗಿದ್ದರು.
“ಸರಿ ಅಮ್ಮೋರೆ ವಿಲಾಸಿನಿ ಅಮ್ಮೋರು ನನ್ನ ಮೊಮ್ಮಗಳಿದ್ದಂಗಲ್ವ್ರಾ .. ಬತ್ತೆ ಬಿಡಿ “
“ನಾಳೆ ಬೆಳಗಪ್ಪಾಗೆ ಬಂದುಬಿಡು ಹಂಗರೆ “ ಗಂಗಮ್ಮನ ಕಣ್ಣಲ್ಲಿ ಕೃತಜ್ನತೆಯ ಭಾವವಿತ್ತು. ಆಗ ವೆಂಕಮ್ಮನ ಕಣ್ಣಲ್ಲೂ ಅದೇ ಭಾವ.
ಅದಕ್ಕೂ ಕಾರಣವಿಲ್ಲದಿಲ್ಲ. ಹುಟ್ಟಿನಿಂದಲೂ ವೆಂಕಮ್ಮನ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಚಿಕ್ಕ ಗುಡಿಸಲೇ ಅರಮನೆ. ಅಮ್ಮ ಕೂಲಿ ನಾಲಿ ಮಾಡಿಬಂದ ಕಾಸಿನಲ್ಲೇ ಜೀವನ. ಕುಡಿದು ಬಂದ ಅಪ್ಪ, ಅಮ್ಮನಿಗೆ ಹೊಡೆಯುವುದನ್ನು ನೋಡಿ ಹೆದರುವುದರಲ್ಲೇ ಬಾಲ್ಯ ಮುಗಿದಿತ್ತು. ಯೌವನಕ್ಕೆ ಬಂದೊಡನೆಯೇ ಪಕ್ಕದೂರಿನ ಗಿರಪ್ಪನ ಮಗ ಕೃಷ್ಣಪ್ಪನ ಜೊತೆ ಮದುವೆ ನಿಶ್ಚಯಿಸಿದ್ದರು. ಕೃಷ್ಣಪ್ಪ ಲಾರಿ ಓಡಿಸುತ್ತಿದ್ದರಿಂದ ವರದಕ್ಷಿಣೆಯನ್ನೂ ಸ್ವಲ್ಪ ಹೆಚ್ಚೇ ಕೇಳಿದ್ದರು. ಕಾಡಿ ಬೇಡಿ, ಸಾಲಮಾಡಿ ಮಗಳ ಮದುವೆ ಮಾಡಿದ್ದ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾಗಿ ಎರಡು ವರ್ಷದಲ್ಲೇ ರಸ್ತೆ ಅಫಘಾತದಲ್ಲಿ ಕೃಷ್ಣಪ್ಪ ತೀರಿಕೊಂಡಿದ್ದ. ಸಣ್ಣ ವಯಸ್ಸಿನಲ್ಲೇ ವಿಧವೆಯಾಗಿದ್ದ ವೆಂಕಮ್ಮನ ಬಾಳು ಬೀದಿಗೆ ಬಂದಿತ್ತು. ದಿಕ್ಕು ತೋಚದ ವೆಂಕಮ್ಮ ಬೇರೆ ಉಪಾಯವಿಲ್ಲದೆ ಗಂಟು ಮೂಟೆ ಕಟ್ಟಿಕೊಂಡು ಉಟ್ಟ ಬಟ್ಟೆಯಲ್ಲೇ ಊರು ಬಿಟ್ಟಿದ್ದಳು.  ಘಟ್ಟದ ಮೇಲೆ ಕೆಲಸ ಹುಡುಕಿಕೊಂಡು ಕುಂದಾಪುರದಿಂದ ಬಂದಿದ್ದ ವೆಂಕಮ್ಮನಿಗೆ ಕೆಲಸ ಕೊಟ್ಟು, ತಮ್ಮ ಬೆಟ್ಟದಲ್ಲೇ ಗುಡಿಸಲನ್ನು ಮಾಡಿಸಿಕೊಟ್ಟಿದ್ದು ಗಜಾನನ ಹೆಗಡೇರೇ. ಉಣ್ಣಲು ಹಿಡಿ ಹಿಟ್ಟೂ ಇಲ್ಲದ ಕಾಲದಲ್ಲಿ ತಮ್ಮ ಮನೆಯ ಹಿತ್ಲಾಕಡಿಯಲ್ಲಿ ವೆಂಕಮ್ಮನ ಪೂರ್ತಿ ಸಂಸಾರಕ್ಕೂ ಊಟ ಹಾಕಿದ್ದವರು ಇದೇ ಗಂಗಮ್ಮ. ಮಗಳು ನಿಂಗವ್ವನ ಮದುವೆ ಸಮಯದಲ್ಲಿ ಅಕ್ಕಿ ಕಾಯಿಯಿಂದ ಹಿಡಿದು ಪಾತ್ರೆ , ಸೀರೆಗಳವರೆಗೆ ಸಾಮಾನುಗಳು ಹೆಗಡೇರ ಮನೆಯಿಂದಲೇ ಬಂದಿದ್ದವು. ಕಷ್ಟ ಕಾಲದಲ್ಲಿ ಯಾವಾಗ ದುಡ್ಡು ಬೇಕೆಂದರೂ ಇಲ್ಲವೆಂದು ಹೇಳಿರಲಿಲ್ಲ ಹೆಗಡೇರು. ಅಂಥವರ ಮನೆ ಕೆಲಸಕ್ಕೆ ಕರೆದಾಗ ಇಳಿವಯಸ್ಸಿನಲ್ಲೂ ತನ್ನೆಲ್ಲ ನೋವು, ಕಷ್ಟ, ಬಡತನವನ್ನೆಲ್ಲ ಬದಿಗಿಟ್ಟು  ಸೊಂಟ ಬಗ್ಗಿಸಿ ಸಾವಕಾಶವಾಗಿ ಹೆಗಡೇರ ಮನೆಯೆಡೆಗೆ ಹಣ್ಣು-ಹಣ್ಣು ಮುದುಕಿ ವೆಂಕಮ್ಮ ಹೆಜ್ಜೆಯಿಟ್ಟಿದ್ದರು. 


3 ಕಾಮೆಂಟ್‌ಗಳು: