ಶನಿವಾರ, ಡಿಸೆಂಬರ್ 1, 2012

ಎಂಪಿಯ ಕಂಪು

                                            ಅಂತೂ ರೈಲು ಖಂಡ್ವಾ ಜಂಕ್ಷನ್ ತಲುಪಿತ್ತು. ಆಗ ರಾತ್ರಿ ಬರೋಬ್ಬರಿ 10.30. ರೈಲಿನ ಇಂಜಿನ್ ಪುಣೆಯಲ್ಲಿ ಕೆಟ್ಟುಹೋಗಿ ಬರೋಬ್ಬರಿ ಆರು ಘಂಟೆ ತಡವಾಗಿ ತಲುಪಿದ್ದೆವು. ಆದರೂ ಅಬ್ಬಾ ಅನ್ನುವಂತಹ ಜನಸಂದಣಿ. ಹಾಗೂ ಹೀಗೂ ನನ್ನ ಎರಡೂ ಸೂಟ್ಕೇಸ್ಗಳನ್ನು ಹೊತ್ತುಕೊಂಡು ನಾಲ್ಕನೇ ಪ್ಲಾಟ್ಫಾರಂನಿಂದ ಮೊದಲನೆ ಪ್ಲಾಟ್ಫಾರಂಗೆ ತಲುಪುವಷ್ಟರಲ್ಲಿ ಎತ್ತೆತ್ತರದ ವೇ ಬ್ರಿಜ್ಗಳು ನನ್ನನ್ನು ಹೈರಾಣು ಮಾಡಿದ್ದವು. ಹೊಟ್ಟೆ ಬೇರೆ ಚುರುಗುಟ್ಟುತ್ತಿತ್ತು. ಎಲ್ಲಾ ಮಕ್ಕಳು ಇದ್ದಾರೆಂದು ಖಚಿತಪಡಿಸಿಕೊಂಡನಂತರವೇ ಅಜಯ್ ಕುಮಾರ್ ಸರ್ ಹತ್ತಿರದಲ್ಲೇ ಎಲ್ಲಾದರೂ ಹೋಟೆಲು ತೆರೆದಿದೆಯಾ ಎಂದು ನೋಡಿಕೊಂಡು ಬರಲು ಹೋಗಿದ್ದು. ಹದಿನೈದು ನಿಮಿಷದ ನಂತರ ಹಿಂದಿರುಗಿದ ಅವರು ನಮ್ಮನ್ನೆಲ್ಲಾ ಒಂದು ಢಾಬಾಗೆ ಕರೆದೊಯ್ದರು. ಹೊರಗೆ ಜಿನುಗುಡುತ್ತಿರುವ ಮಳೆಗೆ ಸ್ಪರ್ಧೆ ಒಡ್ಡುವಂತೆ ನಮ್ಮ ಟೇಬಲ್ ಮೇಲೆ ನೊಣಗಳು ಹಾರಾಡುತ್ತಾ ಸದ್ದು ಮಾಡುತ್ತಿದ್ದವು. ಆ ಢಾಬಾದ ಮೆತ್ತಿನಲ್ಲಿ ಕುಡುಕರು ಚೀರಾಡುತ್ತಿರುವ ಸದ್ದು ನಮ್ಮನ್ನು ಇನ್ನೂ ಹೆದರಿಸಿತ್ತು. ಪನೀರ್ ಮಸಾಲಾ, ರೋಟಿ ಎಂದು ಡಾಬಾದವನು ಊಟವನ್ನು ನಮ್ಮಮುಂದಿಡುತ್ತಿದ್ದಂತೆಯೇ ವಾಕರಿಸಿದಂತಾಯಿತು. ಆ ಸ್ತಳವೇ ಕೊಳಚೆಯಂತಿತ್ತು. ನಾವು ನಾಲ್ಕೈದು ಜನ ಊಟವನ್ನೇ ಮಾಡಲಿಲ್ಲ. ಮುಂದಿನ ಒಂದು ವರುಷ ಇಂತಹುದೇ ಊಟ ಮಾಡಬೇಕಾದೀತೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ನಂತರ ಎರಡು ಘಂಟೆ ಬಸ್ಸಿನಲ್ಲಿ ಪಯಣ. ಮಳೆ ಹೊಯ್ಯುತ್ತಿದ್ದರಿಂದ ನಮ್ಮ ಲಗೇಜ್ ಗಳನ್ನೆಲ್ಲಾ ಬಸ್ಸಿನ ಕೊನೆಯ ಸೀಟ್ಗಳ ಮೇಲೆ ಇಟ್ಟಿದ್ದರು. ನಾವೆಲ್ಲ ನಮ್ಮ ಸೂಟ್ಕೇಸ್, ಬ್ಯಾಗ್ ಗಳ ಮೇಲೇ ಕುಳಿತಿದ್ದೆವು. ಪ್ರಯಾಣದುದ್ದಕ್ಕೂ ಹರಟುತ್ತಿದ್ದರಿಂದ ನವೋದಯ ಸಮೀಪಿಸಿದ್ದೇ ತಿಳಿಯಲಿಲ್ಲ. ನವೋದಯದ ಎರಡೂ ಗೇಟ್ಗಳಿಗೆ ಬೀಗ ಹಾಕಿದ್ದರು. ಬೇರೆ ದಾರಿಯಿಲ್ಲದೇ ಗುರು,ಶ್ರೇಣಿ,ಸಚಿನ್,ನಾನು ಹೀಗೆ ಒಬ್ಬೊಬ್ಭರಾಗಿ ಗೇಟನ್ನು ಹತ್ತಿಕೊಂಡೇ ಒಳಗೆ ಬಂದೆವು. ಪರ್............ ಏನಿದು ಶಬ್ದ ಎಂದು ಎಲ್ಲರೂ ಮುಖ ಮುಖ ನೋಡಿಕೊಂಡರೆ  ಗೇಟ್ ಹತ್ತುವ ಭರದಲ್ಲಿ ಸ್ನೇಹಿತನೊಬ್ಬನ ಪ್ಯಾಂಟ್ ಹರಿದುಹೋಗಿದ್ದು ತಿಳಿದು ಎಲ್ಲರೂ ನಕ್ಕಿದ್ದೆವು. ಅಷ್ಟರಲ್ಲಿ ಪ್ಯೂನ್ ಬಂದು ನಮಗೆಲ್ಲರಿಗೂ ಡೊರ್ಮೆಟ್ರಿ ಯ ದಾರಿ ತೋರಿಸಿದ. 'ಉದಯಗಿರಿ ಹೌಸ್ ' ಡೊರ್ಮೆಟ್ರಿ ಯ  ಗೋಡೆಯ ಮೇಲೆ ದೊಡ್ಡದಾಗಿ ಹೆಸರು ಬರೆದಿತ್ತು. ಬೆಡ್ಗಳು ಕಡಿಮೆ ಇದ್ದಿದ್ದರಿಂದ ಒಂದೇ ಬೆಡ್ ಮೇಲೆ ಇಬ್ಬಿಬ್ಬರು ಮಲಗಿಕೊಂಡಿದ್ದೆವು.national intigration ಗೆಂದು 9th ಕ್ಲಾಸಿನ 20 ಮಕ್ಕಳನ್ನು ಪ್ರತಿ ವರ್ಷ ಮಧ್ಯಪ್ರದೇಶದ ಜೂನಾಪಾನಿ ನವೋದಯಕ್ಕೆ ಕಳಿಸುವುದು ನಿಯಮ. ನಾವು 19 ಜನ ಹೋಗಿದ್ದೆವು. ಎಲ್ಲರಿಗೂ ಸುಸ್ತಾಗಿದ್ದರಿಂದ ಬೇಗನೆ ನಿದ್ದೆಗೆ ಜಾರಿದ್ದೆವು. ಮರುದಿನ ಮುಂಜಾನೆ ಎದ್ದು ಬಾತ್ ರೂಮ್ ಗೆ ಹೋದರೆ ಅಲ್ಲಿ ನೀರೇ ಬರುತ್ತಿರಲಿಲ್ಲ. "ಅರೆ ಭಾಯಿ ಇಧರ್ ಕಭಿ ಪಾನಿ ನಹೀ ಆತೀ ಹೈ, ಉಧರ್ ಟಂಕಿ ಪೆ ಜಾವೋ ಮೂಹ್ ಧೋನೆಕೆಲಿಯೇ ", ಯಾರು ಎಂದು ತಿರುಗಿದರೆ , " ಮೈ ಪ್ರಶಾಂತ್.... ತುಮ್ ಕರ್ನಾಟಕ್ ಸೆ ಆಯೆ ಹೊನಾ...". ಮುಂದೆ ಇವನೇ ಆತ್ಮೀಯ ಸ್ನೇಹಿತನಾಗುತ್ತಾನೆಂದು ಯಾರಿಗೆ ಗೊತ್ತು?????.
                                                ಮುಖ ತೊಳೆಯಲು ಟಂಕಿಗೆ ಹೋದಾಗಲೇ ಅಲ್ಲಿ ನೀರಿನ ತೊಂದರೆ ಎಷ್ಟರಮಟ್ಟಿಗೆ ಇದೆ ಎಂದು ಗೊತ್ತಾಗಿದ್ದು. ಸುಮಾರು 450 ಗಂಡು ಮಕ್ಕಳಿಗೆ ಸೇರಿ ಅಲ್ಲಿ ಇದ್ದಿದ್ದು ಕೇವಲ ಐದು ನಲ್ಲಿಗಳು ಹಾಗೂ ಒಂದು ಬೋರ್ವೆಲ್. ನಮ್ಮ ದುರಾದೃಷ್ಟಕ್ಕೆ ಆಗ ಬೋರ್ವೆಲ್ ಕೂಡ ಕೆಟ್ಟುಹೋಗಿತ್ತು. ಕುಡಿಯಲು, ಸ್ನಾನಕ್ಕೆ, ಎಲ್ಲಾದಕ್ಕೂ ಅದೇ ನೀರು. ಮುಖ ತೊಳೆದು ತಿಂಡಿತಿನ್ನಲು ಮೆಸ್ ಗೆ ಹೋದೆವು. ಮೆಸ್ ನ ಸ್ಥಿತಿಯೂ ಅಧೋಗತಿಯಾಗಿತ್ತು. ಅಲ್ಲಿದ್ದ ಪ್ಲೇಟ್ ಗಳನ್ನು ತೊಳೆದೇಇಲ್ಲವೇನೋ ಅನ್ನಿಸಿತ್ತು. ಡೈನಿಂಗ್ ಟೇಬಲ್ಗಳನ್ನಂತೂ ಒರೆಸಿ ವರ್ಷಗಳೇ ಆಗಿರಬೇಕು ಅನ್ನಿಸಿತ್ತು. ಪೋಹಾ ತಿಂದು ನಂತರ ಪ್ರಾಂಶುಪಾಲರನ್ನು ಭೇಟಿಮಾಡಿ ಮತ್ತೆ ಹೌಸ್ ಗೆ ಬಂದು ಸುಮ್ಮನೆ ಬೆಡ್ ಗೆ ಒರಗಿದ್ದಾಗಲೇ ನಮ್ಮ ನವೋದಯದಿಂದ ಹೊರಡುವಾಗ ನಡೆದ ಘಟನೆಗಳೆಲ್ಲ ಸ್ಮೃತಿಪಟಲದಲ್ಲಿ ಹರಿದಾಡಿದ್ದು. ಎಂಪಿಯಲ್ಲಿ ಯಾವುದೇ ತೊಂದರೆ ಆಗದಿರಲೆಂದು ನನ್ನ ಫೋಟೋ ಗಣಪತಿಗೆ ನಾನು 108  ದೂರ್ವೆಗಳನ್ನು ಕೊಯ್ದು ಏರಿಸಿದ್ದೆ. ಅಷ್ಟರಲ್ಲೇ ತಂದೆಯವರು ತಮ್ಮ ವಾಗೀಶನೊಂದಿಗೆ ಬಂದಿದ್ದರು. ಇನ್ನು ಧೀರಜ್ ಸೇರಿದಂತೆ ನಮ್ಮ ಕ್ಲಾಸ್ ನವರೆಲ್ಲ ಗೇಟ್ ಹತ್ತಿರ ನೆರೆದಿದ್ದರು. ನನ್ನ ಕಣ್ಣು ಆತ್ಮೀಯ ಸ್ನೇಹಿತ ವಿನಾಯಕನನ್ನು ಹುಡುಕುತ್ತಿತ್ತು. ಆದರೆ ಅವನ ಪತ್ತೆಯೇ ಇರಲಿಲ್ಲ. ಹುಬ್ಬಳ್ಳಿಗೆ ಬಸ್ ಹತ್ತುವವರೆಗೊ ತಡೆದುಕೊಂಡಿದ್ದ ದುಃಖದ ಕಟ್ಟೆ ಕೊನೆಗೂ ಒಡೆದಿತ್ತು. ಚಿಕ್ಕ ಮಗುವಿನಂತೇ ಬಿಕ್ಕಿ ಬಿಕ್ಕಿ ಅಳುತ್ತಲೇ ಎಲ್ಲರಿಗೂ ಬಾಯ್ ಹೇಳಿದ್ದೆ. "ಊಟಕ್ಕೆ ಟೈಮ್ ಆಯ್ತಲೆ " ಸಚಿನ್ ಬೆನ್ನು ತಟ್ಟಿದಾಗಲೇ ನೆನಪಿನ ದುನಿಯಾದಿಂದ ಹೊರಬಂದಿದ್ದೆ. ಅರಿವಿಲ್ಲದೇ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಂಡಿದ್ದೆ.
                                     
                                                 ಇಂದು ಸಂಜೆ ವೀರೇಂದ್ರನ ಫೋನ್ ಬಂದಾಗ ರೂಮಿನ ತುಂಬೆಲ್ಲ ಎಂಪಿಯ ಕಂಪು ಹರಡಿತ್ತು. ಆಗ ಮತ್ತೆ ನೆನಪಿನ ದುನಿಯಕ್ಕೆ ಹೋಗಿದ್ದೆ. ಆಗ ಅಲ್ಲಿ ಕಂಡದ್ದು ಎಂಪಿಗೆ ಹೋದ ಮೊದಲ ದಿನವೇ.... ಒದ್ದೆಯಾದ ಕಂಗಳಲ್ಲಿ ಇದ್ದಿದ್ದು ಆ ನೆನಪುಗಳೇ