ಶುಕ್ರವಾರ, ಜನವರಿ 25, 2013

ಹೀಗೊಂದು ಪ್ರೇಮ ಪತ್ರ


              ನಮ್ಮೂರಿನಿಂದ ಶಿರಸಿಗೆ ಹೋಗಬೇಕೆಂದರೆ ಇರುವುದು ಎರಡೇ ಬಸ್ಸು. ಬೆಳಿಗ್ಗೆ ಒಂಭತ್ತು ಘಂಟೆಯ ಮೊದಲನೇ ಬಸ್ ಗೆ ನಾನು ಕಾಯುತ್ತಾ ನಿಂತಿದ್ದೆ. ಎಲ್ಲೋ ದೂರದಿಂದ ಬಂದ ಹೊವಿನ ಪರಿಮಳವು ಮೂಗಿಗೆ ಸೋಕಿದಾಗ ತಿರುಗಿನೋಡಿದ್ದೆ. ನೀನು ಮುಡಿದಿರುವ ಮಲ್ಲಿಗೆಯು ಎಲ್ಲೆಡೆ ತನ್ನ ಪರಿಮಳವನ್ನು ಪಸರಿಸಿತ್ತು. ನಿನ್ನ ಕೂದಲುಗಳು ಅಷ್ಟೇನೂ ಉದ್ದವಿಲ್ಲದಿದ್ದರೂ ಅದನ್ನೇ ನೀಟಾಗಿ ಬಾಚಿ, ಮಲ್ಲಿಗೆಯ ಮಾಲೆಯನ್ನು ಮುಡಿದುಕೊಂಡರೆ ಯಾವ ಅಪ್ಸರೆಗೂ ಕಡಿಮೆಯಿಲ್ಲದಂತಹ ಸೌಂದರ್ಯ ನಿನ್ನದು. ಕಡುಗಪ್ಪು ಕಂಗಳಲ್ಲಿನ ಆ ಹೊಳಪು, ನೀಳ್ದುಟಿಗಳಲ್ಲಿನ ಆ ಮೊನಚು, ತಿದ್ದಿ ತೀಡಿರುವಂತಹ ಆ ಹುಬ್ಬುಗಳು,ಸ್ವಲ್ಪ ಉದ್ದವಾಯಿತೇನೋ ಅನ್ನುವಂತಹ ನೀಳ ಮೂಗು, ಗೋಧಿ ಬಣ್ಣ. ಎಲ್ಲದಕ್ಕೂ ಮುಕುಟದಂತಿರುವ $ ಆಕಾರದ ಬಿಂದಿ, ಸೌಂದರ್ಯವೇ ಮೈತಳೆದಂತಿರುವ ಮುಗ್ಧ ಚೆಲುವೆ ನೀನು. ನನ್ನನ್ನು ನೋಡಿ ನೀನು ನಗು ಚೆಲ್ಲಿದಾಗ ನಿನ್ನ ಬಾಯಿಂದ ಮುತ್ತುಗಳೇನಾದರೂ ಉದುರಿದವೇ ಎಂದು ನೆಲವನ್ನು ನೋಡಿದ್ದೆ.
           ನಿನ್ನ ಪ್ಲೇನ್ ಕೆಂಪು ಚೂಡಿದರಕ್ಕಿದ್ದ ಹೂವಿನ ಎಂಬ್ರಾಯ್ಡರಿ ನೋಡಿ ತುಂಬಾ ಚೆನ್ನಾಗಿದೆಯೆಂದು ನಾನೆಂದಾಗ, ಅದನ್ನು ನಾನೇ ಕೈಯಾರೆ ಮಾಡಿಕೊಂಡಿದ್ದು ಎಂದು ಹೂವನ್ನು ಎತ್ತಿಟ್ಟಷ್ಟು ಸುಲಭವಾಗಿ ನೀನು ಸುಳ್ಳು ಹೇಳಿದ ರೀತಿಯೇ ನನಗೆ ತುಂಬ ಇಷ್ಟವಾಗಿದ್ದು. ಬಸ್ಸಿನಲ್ಲಿ ನನ್ನ ಪಕ್ಕ ಕುಳಿತುಕೊಳ್ಳದಿದ್ದರೂ ನಿನ್ನ ನೋಟಗಳಿಂದ ದೂರದಿಂದಲೇ ನನ್ನನು ವಶಪಡಿಸಿಕೊಂಡಿದ್ದೆ  ನೀನು. ಶಿರಸಿಗೆ ಬಸ್ ತಲುಪಿದೊಡನೆಯೇ ರಾಮಾಯಣದ ಚಿನ್ನದ ಜಿಂಕೆಯಂತೆ ಮಾಯವಾಗಿದ್ದ ನಿನ್ನನ್ನು ಬಸ್ಸ್ಟಾಂಡ್ ನ ಉದ್ದಗಲಕ್ಕೂ ನಾನು ಹುಡುಕಿದ್ದೆ. ಆದರೆ ನೀನು ಸಿಗದೇ ಇದ್ದಾಗ ನಿರಾಸೆಯಿಂದ ಭಾರವಾದ ಹೃದಯವನ್ನು ಹೊತ್ತು ಮನೆಗೆ ಮರಳಿದ್ದೆ.
         ಅಂದು ನಗೆಬೀರಿ ಮಾಯವಾದ ನೀನು ಮತ್ತೆಂದೂ ನಮ್ಮೂರಿಗೆ ಬರಲೇ ಇಲ್ಲ. ಅಂದು ನೀನು ನಮ್ಮೂರ ಬಸ್ಸ್ಟಾಂಡ್ ನಲ್ಲಿ ಕುಳಿತಿದ್ದ ಜಾಗದಲ್ಲೇ ಕುಳಿತುಕೊಂಡು ದಿನವೂ ನಿನಗೋಸ್ಕರ ಕಾಯುತ್ತಿದ್ದೇನೆ. ನಿನ್ನ ಸೌಂದರ್ಯದಿಂದ ಸ್ವರ್ಗವನ್ನೇ ತೋರಿಸಿದ್ದ ನೀನು ಮತ್ತೊಮ್ಮೆ ಬಂದೇಬರುವೆ ಎಂಬ ನಂಬಿಕೆ ನನಗಿದೆ. ನಿನ್ನ ಬೋಳು ಕತ್ತಿನಲ್ಲಿ ಚಿನ್ನದ ಚೈನೊಂದನ್ನು ತೊಡಿಸುವ,ನಿನ್ನ ಮೃದುವಾದ ಕೆನ್ನೆಗಳನ್ನು ಹಿಂಡುವ, ಸಿಹಿಮುತ್ತೊಂದನ್ನು ನೀಡುವ, ನಿನ್ನ ಜೊತೆ ಕೈಜೋಡಿಸಿ  ದೂರದವರೆಗೆ ಸಾಗುವ ಮಹಾದಾಸೆ ನನಗೆ. ನಿನಗಾಗಿ ಕಾಯುತ್ತಿರುವೆ ಓ ಗೆಳತಿ, ಒಮ್ಮೆಬಂದು ನನ್ನ ಪ್ರೇಮದ ಸುಧೆಯಲ್ಲಿ ಮಿಂದು ನೋಡು........