ಗುರುವಾರ, ಜನವರಿ 30, 2014

ಪನ್ನೆಯ ಮಾಡಿದರೆ.......





ಅಪ್ಪಾ ನಂಗೆ ಶಾಲೆಲಿ ಎಲ್ಲರೂ ಚಾಳಸ್ತ, ನಾನು ನಾಳೇನೆ ಅನಂತನ ಹತ್ರ ಹೋಗಿ ಜುಟ್ಟ ಕತ್ರಸ್ಗ ಬತ್ತಿ ” ರಾಜರಾಮ ಭಟ್ಟರ ಮಗ ಅನಂತಶಯನ ಶಾಲೆಯಿಂದ ಮನೆಗೆ ಬಂದವನೆ ರಚ್ಚೆ ಹಿಡಿದಿದ್ದ.
“ಸಂಜೆಕಡಿಗೆ ಆ ವಿಷಯ ಎಲ್ಲಾ ಮಾತಾಡಲ್ಲಾಗ ಹೇಳಿ ಎಷ್ಟು ಸಲ ಹೇಳವು ನಿಂಗೆ ?? ಬರೀ ಬಾಯ್ ಮಾತಲ್ಲಿ ಹೇಳಿರೆ ಅರ್ಥನೆ ಆಗ್ತಿಲ್ಲೆ ಕಾಣ್ತು ಅಲ್ದನು, ಎಂತಾ.. ಆನು ಹೇಳಿದಿದ್ನ ನಿಂಗೆ ಜುಟ್ಟ ಬಿಡಲ್ಲೆ ?? ಈಗ ಥೈ ಥೈ ನೆ ಕುಣಿದ್ರೆ ಬಾರ್ಸ್ತಿ ಎರಡಾ “  ರಾಜರಾಮ ಭಟ್ಟರ ಬೆಳ್ಳನೆಯ ಮೂಗು ಕೆಂಪಾಗಿತ್ತು, ಹಣೆಯಲ್ಲಿ ನೂರು ನೆರಿಯಾಗಿತ್ತು.ಅಪ್ಪನ ಸಿಟ್ಟನ್ನು ನೋಡಿ, ಇನ್ನೆಲ್ಲಿ ತನಗೆ ಪೆಟ್ಟು ಬೀಳುವುದೋ ಎಂದು ತೆಪ್ಪಗಾಗಿದ್ದ ಶಯನ.

ಶಯನನಿಗೆ ಆಗಿನ್ನೂ ಏಳು ವರ್ಷ. ಪಕ್ಕದ ಮನೆ ವಿಕಾಸಣ್ಣನ ಉಪನಯನ ನಿಗದಿಯಾಗಿತ್ತು. ಉಪನಯನದ ದಿನ ವಿಕಾಸಣ್ಣನ ತಲೆ ಪೂರ್ತಿ ಬೋಳಿಸಿ ಮಧ್ಯದಲ್ಲೊಂದು ಜುಟ್ಟು ಬಿಟ್ಟಿದ್ದನ್ನು ಶಯನ ನೋಡಿದ್ದೇ ತಡ, ಅಪ್ಪನ ಹತ್ತಿರ ಹೋಗಿ “ಅಪ್ಪಾ , ನನ್ನ ಉಪನಯನದಲ್ಲಿ ನಾನೂ ವಿಕಾಸಣ್ಣನ ಹಾಂಗೆ ಜುಟ್ಟ ಬಿಡ್ತಿ” ಎಂದು ಉಸುರಿದ್ದ. ಶಯನನಿಗೆ ವರುಷ ಏಂಟಾಗಿದ್ದೆ ತಡ, ರಾಜರಾಮ ಭಟ್ಟರು , ಪುರೋಹಿತ ಭಟ್ಟರ ಮನೆಗೆ ಹೋಗಿ ಉಪನಯನದ ದಿನಾಂಕ, ಮುಹೂರ್ತ ನಿಶ್ಚಯಿಸಿ ಬಂದರು. ಉಪನಯನಕ್ಕೆ ಇನ್ನು ಕೆಲವೇ ದಿನ ಇರುವಾಗ ಶಯನನಿಗೆ ತನ್ನ ತಲೆಯ ಚಿಂತೆ ಶುರುವಾಗಿದ್ದು. ತಲೆ ಬೋಳಿಸಿಕೊಂಡು, ಜುಟ್ಟು ಬಿಟ್ಟು ತಾನು ಶಾಲೆಗೆ ಹೇಗೆ ಹೋಗಲಿ ?? “ಶಯನ ಭಟ್ಟ ಕೋಳಿ ಜುಟ್ಟ “ ಎಂದು ಕರೆದರೆ ಏನು ಮಾಡ್ಲಿ ಎಂದೆಲ್ಲಾ ಯೋಚಿಸುವಷ್ಟರಲ್ಲೇ ಉಪನಯನದ ದಿನ ಹತ್ತಿರ ಬಂದಿತ್ತು.
ಪಾಪ ರಾಜರಾಮ ಭಟ್ಟರದ್ದೇನು ತಪ್ಪಿರಲಿಲ್ಲ, ಜುಟ್ಟು ಬಿಡುವುದು ಮಗನ ಆಸೆ ಎಂದೇ ತಿಳಿದಿದ್ದರು. ಜುಟ್ಟು ಬಿಟ್ಟರೆ ತುಂಬಾ ಒಳ್ಳೆಯದೆಂದೂ,ಮಗ ತುಂಬಾ ಬುದ್ದಿವಂತನಾಗುತ್ತಾನೆಂದೂ ಖುಶಿಯಿಂದಿದ್ದರು.ಜುಟ್ಟು ಬಿಟ್ಟರೆ, ಸಂಧ್ಯಾವಂದನೆ, ಜಪ ಮಾಡಿದ ಪುಣ್ಯಗಳೆಲ್ಲಾ ಜುಟ್ಟದಲ್ಲೇ ಸಂಗ್ರಹವಾಗುತ್ತದೆ ಎಂದು ಎಲ್ಲೋ ಓದಿದ ನೆನಪು ಬೇರೆ.ಆದರೆ ಹುಂಬ ಶಯನ, ಏನೋ ಒಂದು ಸಲ ಚಂದ ಕಂಡಿತು ಅಂತ ಹೇಳಿದ್ರೆ, ನಿಜವಾಗಿಯೂ ತಲೆ ಪೂರ್ತಿ ಬೋಳಿಸಿಕೊಳ್ಳಬೇಕು ಎಂದು ಊಹಿಸಿರ್ಲಿಲ್ಲ. ಈಗ ಬೇಡ ಅಂತ ಹೇಳಿದ್ರೆ ಅಪ್ಪ ಎಲ್ಲಿ ಬೈಯ್ಯುತ್ತಾರೋ ಅನ್ನೋ ಭಯ ಬೇರೆ. ಆದದ್ದಾಗಲಿ ಅಂತ ಏನೂ ಹೇಳದೇ ಸುಮ್ಮನಿದ್ದ.

ಅಂತೂ ಉಪನಯನದ ದಿನ ಬಂದಿತ್ತು, ವೈಶಾಖ ಶುದ್ಧ ಪಂಚಮಿ. “ವಿಘ್ನೇಶ್ವರಾನಾ ಬಲಗೊಂಬೆ ssss ಶಿದ್ದಿಗಳಾಗಲಿ ನಮಗೆssss .... “ ಎನ್ನುತ್ತಾ ಕಾರ್ಯಕ್ರಮಗಳನ್ನು ಶುರುಮಾಡಿ, ಬ್ರಹ್ಮಚಾರಿಗಳ ಊಟದ ನಂತರ ಪನ್ನೆ ಕಾರ್ಯಕ್ರಮ. ಪನ್ನೆ ಎಂದರೆ ಶುಭ ಕಾರ್ಯಕ್ಕೆ ಮುನ್ನ ಕೂದಲು ತೆಗೆಸುವುದು. ಪನ್ನೆ ಮಾಡಲು ಅನಂತನೇ ಬಂದಿದ್ದ. ಶಾಸ್ತ್ರಕ್ಕೆಂದು ಅಪ್ಪ ಎರಡು ಕೂದಲು ಕತ್ತರಿಸಿದ ನಂತರ
ಹೆಂಗಸರೆಲ್ಲ “ಪನ್ನೆಯ ಮಾಡಿದರೆ sssss ಅನಂತ ಶಯನಗೆ ಪನ್ನೆಯ ಮಾಡಿದರೆ sssss .............” ಎಂದು ಹಳೆ ಹಾಡು ಹೇಳುತ್ತಾ ಪನ್ನೆಗೆಂದೇ ಹಾಕಿದ್ದ ಕೆಮ್ಮಣ್ಣು-ಶೇಡಿ ರಂಗೋಲಿಯ ಮೇಲೆ ಶಯನನನ್ನು ಕುಳಿಸಿದ್ದರು. ಅನಂತ ತನ್ನ ಶಸ್ತ್ರಾಸ್ತ್ರ ಗಳನ್ನೆಲ್ಲ ತೆಗೆಯುತ್ತಿದ್ದಂತೆ, “ ತಮ್ಮಂಗೆ ಒಂದು ಕನ್ನಡಿ ಕೊಡ್ರೆ “ ಕುಳಿತಲ್ಲಿಂದಲೆ ಅಜ್ಜಿ ಆದೇಶಿಸಿದ್ದರು. ಕನ್ನಡಿ ಹಿಡಿದು ಕುಳಿತಿದ್ದ ಶಯನನಿಗೆ ತನ್ನ ತಲೆ ಬೋಳಾಗುತ್ತಿರುವುದನ್ನು ನೋಡಿ ಎರಡೂ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಆದರೆ ತಾನು ಇಷ್ಟು ದೊಡ್ಡವನದಮೇಲೂ ಅಳುವುದನ್ನು ಯಾರಾದರೂ ನೋಡಿಬಿಟ್ಟರೆ ಅನ್ನೋ ನಾಚಿಕೆಯಿಂದ ಕಷ್ಟಪಟ್ಟು ಅಳುವನ್ನು ತಡೆದುಕೊಂಡಿದ್ದ. ಆದರೂ ಕಣ್ಣಿಂದ ನಾಲ್ಕು ಹನಿ ಕನ್ನಡಿಯ ಮೇಲೆ ಬಿದ್ದಿದ್ದನ್ನು ಶೋಭಾ ಅತ್ತೆ ನೋಡಿದ್ದರು. ಹೆಂಗಸರ ಹಳೆ ಹಾಡು ಇನ್ನೂ ಮುಂದುವರೆದಿತ್ತು....

16 ಕಾಮೆಂಟ್‌ಗಳು:

  1. ಒಂಥರಾ ಹಳೇದೆಲ್ಲಾ ನೆನ್ಪ್ ಮಾಡ್ ಮಾಡಿ ಬರ್ದ ಹಂಗಿದ್ದು.. ನೈಸ್.....

    ಪ್ರತ್ಯುತ್ತರಅಳಿಸಿ
  2. ಚೆನ್ನಗಿದೆ ವಾಸುಕಿ, ಮುನ್ದುವರಿಸು ಹೀಗೆ ಬರೆಯುವುದನ್ನು

    ಪ್ರತ್ಯುತ್ತರಅಳಿಸಿ
  3. Unbelievable! Where was this 'writer' Vasuki?! Buddy, write more.. Havyaka preferably was what took me off really.. Appreciable. Feeling more special being your friend, time by time!

    Sorry.. Couldn't type in Kannada as it is not supporting here now!!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಥ್ಯಾಂಕ್ಯೂ.... ಧೀರಜ್.... ಇದು ಸ್ವಲ್ಪ ಡಿಫರೆಂಟ್ ಇದ್ದಿದ್ದರಿಂದ ಪೋಸ್ಟ್ ಮಾಡಲು ಸ್ವಲ್ಪ ಹೆದರಿದ್ದೆ..... :)

      ಅಳಿಸಿ
  4. ವಾಸುಕಿ ಚಲೋ ಆಜು. different ಆಗಿ ಬರದ್ದೆ. ಹಿಂಗೆ continue ಮಾಡು. ಬೇರೆ ಬೇರೆ ತರಹದ ಬರವಣಿಗೆ ಇರ್ಲಿ. ಆವಾಗ ನಿನ್ನ ಬರೆಯುವ ಶೈಲಿ improve ಅಗ್ತು ಜೊತೆಗೆ literature ಸಹಿತ improve ಆಗ್ತು.

    ಪ್ರತ್ಯುತ್ತರಅಳಿಸಿ
  5. ಹ್ಮ.... ಅಡ್ಡಿಲ್ಲೆ....... ಬೇರೆ ಬೇರೆ ಥರ ಬರ್ಯಲ್ಲೆ ಟ್ರೈ ಮಾಡ್ತಿ..... ಥ್ಯಾಂಕ್ಯು... :)

    ಪ್ರತ್ಯುತ್ತರಅಳಿಸಿ