ಭಾನುವಾರ, ಮಾರ್ಚ್ 24, 2013

ಜನರೇಷನ್ ಗ್ಯಾಪ್







        

 

                       “ಎಷ್ಟು ಹೊತ್ತು ಆ ಕಂಪ್ಯೂಟರ್ ನ ಮುಂದೆ ಕುಳಿತು ಕಾಲಹರಣ ಮಾಡ್ತೀಯಾ, ಓದೋದು ಬರೆಯೋದು ಏನು ಇಲ್ವಾ?.. ಅಯ್ಯೋ ಘಂಟೆ 11 ಆಯ್ತು, ಸುಮ್ನೆ ಟಿ‌ವಿ ಆಫ್ ಮಾಡಿ ಮಲಗು, ರಾತ್ರಿ ಇಡೀ ಹಾಳು ಮೂಳು ಏನೇನೋ ನೋಡಿ ಹಾಳಾಗಿ ಹೋಗ್ತೀಯಾ. ನಾಳೆ ಬೆಳಿಗ್ಗೆ ಸೂರ್ಯ ನೆತ್ತಿಯ ಮೇಲೆ ಬಂದ್ರೂ ಬೆಳಿಗ್ಗೆ ಆಗಲ್ಲ ನಿಂಗೆ “, ಈ ರೀತಿ ಮಾತುಗಳನ್ನು ನಾವು ಎಲ್ಲ ಮನೆಗಳಲ್ಲೂ ಕೇಳಿರ್ತೀವಿ. ಹಾಗೆಯೇ “ ಅಯ್ಯೋ ಆಯ್ತು ಇನ್ನು ಐದೇ ನಿಮಿಷ ಟಿ‌ವಿ ಆಫ್ ಮಾಡಿ ಮಲಗ್ತೀನಿ, ನೀನು ಈಗ ಹೋಗಿ ಮಲಗು.” ಅನ್ನೋ ಮಕ್ಕಳ ಮಾತುಗಳನ್ನು ಕೂಡ. ತನ್ನ favourite ಟಿ‌ವಿ ಶೋ ಶುರು ಆಗೋದೇ ರಾತ್ರಿ 10.30 ಕ್ಕೆ. ಆ ಶೋ ಮುಗಿಸದೆ ಮಲಗುವ ಜಾಯಮಾನವೇ ಅಲ್ಲ ಮಗನದ್ದು. ಮಗ ರಾತ್ರಿ ಹನ್ನೆರಡರವರೆಗೂ ಟಿ‌ವಿ ನೋಡ್ತಾನೆ. ಬೆಳಿಗ್ಗೆ ಘಂಟೆ ಎಂಟಾದ್ರೂ ಏಳಲ್ಲ, ಕೆಟ್ಟು ಹೋಗಿದಾನೆ, ಅನ್ನೋದು ತಂದೆಯ ಗೋಳಾದರೆ, ನಾನು ಎಷ್ಟು ಹೊತ್ತು ಟಿ‌ವಿ ನೋಡಿದ್ರೆ ಇವರಿಗೇನು? ಇವರ ಥರ ಮನೆಹಾಳು ಧಾರಾವಾಹಿಗಳನ್ನೇನು ನಾನು ನೋಡಲ್ವಲ್ಲಾ. ನಾಲಕ್ಕು ದಿನ ರಜೆಯಲ್ಲೂ ಆರಾಮಾಗಿ ಇರೋಕೆ ಬಿಡಲ್ಲ ಎನ್ನುವುದು ಮಕ್ಕಳ ದೂರು.

                     ಇಷ್ಟೆಲ್ಲಾ ವೈಮನಸ್ಸಿಗೆ ತಂದೆ ತಾಯಿ ಮತ್ತು ಮಕ್ಕಳ ನಡುವಿನ ವಯಸ್ಸಿನ ಅಂತರವೇ ಕಾರಣ ಅನ್ನುವುದು ನನ್ನ ಅನಿಸಿಕೆ. ಈ ಅಂತರವನ್ನೇ ಜನರೇಷನ್ ಗ್ಯಾಪ್ ಎನ್ನಬಹುದು. ಜಗತ್ತು ಬೆಳಕಿನ ವೇಗದಲ್ಲಿ ಬದಲಾಗುತ್ತಿದೆ. ಆದರೆ ಆಗುತ್ತಿರುವ ಬದಲಾವಣೆಯನ್ನು ಒಪ್ಪಲು ಯಾರೂ ತಯಾರಿಲ್ಲ. “ನಮ್ಮ ಕಾಲದಲ್ಲಿ ರೇಡಿಯೊ, ಟಿ‌ವಿಗೂ ಗತಿ ಇರಲಿಲ್ಲ, ನಿನಗೆ ಕಂಪ್ಯೂಟರ್, ಮೊಬೈಲ್ ಎಲ್ಲ ಇದ್ದರೂ ಇನ್ನೂ ಬೇಕೆನ್ನುವ ದುರಾಸೆ. ನಾವು ಚಿಕ್ಕವರಿದ್ದಾಗ ಒಂದೊಂದು ಪೈಸೆಗೂ ಎಷ್ಟು ಕಷ್ಟಪಟ್ಟಿದೀವಿ ಅನ್ನೋದು ನಿನಗೆಲ್ಲಿ ಅರ್ಥ ಆಗುತ್ತೆ, ಬಾಳೆ ಹಣ್ಣನ್ನು ಸುಲಿದು ಬಾಯಿಗಿಟ್ಟರೂ ತಿನ್ನಲು ನಿಮಗೆ ಆಲಸ್ಯ.” ಎಂದು ಹಿರಿಯರು ಮಕ್ಕಳನ್ನು ದೂರುತ್ತಾರೆ. ಈಗಿನ ಜಗತ್ತೇ ಮಕ್ಕಳನ್ನು ಅಲಸಿಯನ್ನಾಗಿ ಮಾಡಿದೆ ಅನ್ನುವ ಸತ್ಯವನ್ನು ಒಪ್ಪಲು ಹಿಂಜರಿಯುತ್ತಾರೆ.

                     ಸಂಗೀತಾಸಕ್ತಿಯಿಂದ ಹಿಡಿದು ರಾಜಕೀಯ ಆಸಕ್ತಿಯಲವರೆಗೂ ನಾವು  ಜನರೇಷನ್ ಗ್ಯಾಪ್ ಅನ್ನು ಕಾಣಬಹುದು. ಈಗಿನ ಜನರೇಷನ್ನವರು ಎಲ್ಲ ಸಂಗೀತದಲ್ಲೂ ಆಸಕ್ತಿ ತೋರಿಸುತ್ತಾರೆ. ಆದರೆ ಹೇಳಿದ್ದನ್ನೇ ಬೇರೆ ಬೇರೆ ರಾಗದಲ್ಲಿ, ತಾಳದಲ್ಲೂ ಹೇಳುವ ಶಾಸ್ಟ್ರೀಯ ಸಂಗೀತವೆಂದರೆ ಬೋರು, ಬೋರು. ಗಿಟಾರ್ , ಡ್ರಮ್ ನ ಸಂಗೀತವೆಂದರೆ ಎಲ್ಲಿಲ್ಲದ ಆಸಕ್ತಿ. ಆದರೆ ಹಿರಿಯರ ಪ್ರಕಾರ ಶಾಸ್ಟ್ರೀಯ ಸಂಗೀತವೇ ನಿಜವಾದ ಸಂಗೀತ. ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸಿದರೆ ಸಿಗುವ ಆನಂದವೇ ಬೇರೆ. ಹಾಗೆಯೇ ರಾಜಕೀಯ ವಿಷಯಕ್ಕೆ ಬಂದರೆ, ಸತ್ಯ ಸಜ್ಜನರಾಗಿರುವ ಯುವ ಮುಖಂಡರೆಂದರೆ ಯುವಕರಿಗೆ ಆಸಕ್ತಿ, ತದ್ವಿರುದ್ದವಾಗಿ ಹಿರಿಯ ರಾಜಕಾರಣಿಗಳೆಂದರೆ ಹಿರಿಯರಿಗೆ ದೇವರ ಸಮಾನ.

                    ಈಗ ವೈದ್ಯಕೀಯ ವಿಭಾಗಗಳಲ್ಲಿ  ಏನೇ ಆವಿಷ್ಕರಗಳಾಗಿದ್ದರೂ, ಇದು ಆಯುರ್ವೇದದಲ್ಲಿ ಮೊದಲೇ ಇತ್ತು, ಈಗ  ಮಾಡುತ್ತಿರುವ ಆವಿಷ್ಕರಗಳನ್ನೆಲ್ಲ ನಮ್ಮ ಪೊರ್ವಜರು ಮೊದಲೇ ಮಾಡಿದ್ದರು ಎನ್ನುವ ಮಾತು ಹಿರಿಯರದ್ದು. ಪುಷ್ಪಕ ವಿಮಾನದಂತಹ ಉದಾಹರಣೆಗಳಿಂದ ತಮ್ಮನ್ನು ಅವರು ಸಮರ್ಥಿಸಿಕೊಳ್ಳುತ್ತಾರೆ ಕೂಡ. ಈಗಿನ ಹೊಸ ಆವಿಷ್ಕಾರಗಳ ಉಪಯೋಗವನ್ನು ಅವರು ಧಾರಾಳವಾಗಿ ತೆಗೆದುಕೊಳ್ಳುತ್ತಿದ್ದರೂ ಕೂಡ  ಅದನ್ನು ಒಪ್ಪಲು ಅವರು ತಯಾರಿರುವುದಿಲ್ಲ.

                   “ಪರಿವರ್ತನೆ ಜಗದ ನಿಯಮ” ಎಂಬುದು ಭಗವಂತನ ಮಾತು. ಆದರೆ ಆಗುತ್ತಿರುವ ಪರಿವರ್ತನೆಯನ್ನು ಒಪ್ಪಲು ಹಳೆಯ ಜನರೇಷನ್ ಅವರು ತಯಾರಿಲ್ಲ, ತನ್ನ ಸುತ್ತಲೂ ಎಷ್ಟೆಲ್ಲಾ ಬದಲಾವಣೆಗಳಗುತ್ತಿದ್ದರೂ ಹಳೆಯದನ್ನೇ ಅಪ್ಪಿ ಕೂರಲು ಈಗಿನ ಜನರೇಷನ್ ಅವರು ತಯಾರಿಲ್ಲ.ಈಗ ಎಲ್ಲ ಕೆಲಸಗಳೂ ಬೇಗನೇ ಮುಗಿಯಬೇಕು. ಹಿಂದಿನವರ ತರಹ ಕಾಯ್ದು ಕೂರುವಷ್ಟು ಸಂಯಮ ಈಗಿನವರಿಗಿಲ್ಲ.

                    ಆದರೆ ಎಷ್ಟೇ ತರ್ಕ ಮಾಡಿದರೂ ಹಿರಿಯರಿಗೆ ವಯಸ್ಸಿನ ಜೊತೆ ಜೀವನಾನುಭವವಾಗಿರುತ್ತದೆ. ನಾವು ಈಗ ತಾಂತ್ರಿಕವಾಗಿ, ಬೌದ್ಧಿಕವಾಗಿ ಎಷ್ಟೇ ಮುಂದುವರೆದಿರಬಹುದು ಆದರೆ ಹಿರಿಯರ ಅನುಭವಕ್ಕೆ ನಾವು ತಲೆಬಾಗಲೇಬೇಕು. ಹಾಗೆಯೇ ಹಿರಿಯರೂ ಕೂಡ ಆಗುತ್ತಿರುವ ಪರಿವರ್ತನೆಯನ್ನು ಒಪ್ಪಿಕೊಂಡು, ಹೊಸದನ್ನು ಅಪ್ಪಿಕೊಳ್ಳಬೇಕು. ಆಗಲೇ ಜನರೇಷನ್ ಗ್ಯಾಪ್ ಕಡಿಮೆಯಾಗಲು ಸಾಧ್ಯ. ವಯಸ್ಸಿನ ಅಂತರವು ಮನಸ್ಸಿನ ಅಂತರಕ್ಕೆ ಕಾರಣವಾಗಬಾರದು. “ಹಳೆ ಬೇರು, ಹೊಸ ಚಿಗುರು ಕೂಡಿದರೆ ಮರ ಸೊಬಗು” ಎಂಬ ಡಿ‌ವಿ‌ಜಿ ಅವರ ಮಾತನ್ನು ನಾವು ಅರ್ಥಮಾಡಿಕೊಂಡು ಒಟ್ಟಾಗಿ ಮುನ್ನಡೆಯಬೇಕು.

ಜನರೇಷನ್ ಗ್ಯಾಪ್ ಎಂಬುದೇ ಇಲ್ಲ ಎನ್ನುವವರಿಗೆ ಒಂದು ಉದಾಹರಣೆ ಇಂತಿದೆ:

ಹಳೆ ಜನರೇಷನ್ : ಪಾಪಾ ಕೆಹೆತೇಹೈ ಬಡಾ ನಾಮ್ ಕರೆಗಾ , ಬೇಟಾ ಹಮಾರಾ ಐಸಾ ಕಾಮ್ ಕರೆಗಾ......

ಹೊಸ ಜನರೇಷನ್ : ಡ್ಯಾಡಿ ಮುಝಸೆ ಬೋಲಾ ತು ಗಲ್ತಿ ಹೈ ಮೆರೀ........


7 ಕಾಮೆಂಟ್‌ಗಳು:

  1. Good One Puttu.... chennaagiddu..... naavu ee generationvu adru " Hosa beru Halee chiguru Koodiralu mara sobagu " annadanna aoppikondaagtu andamele nee helidante Hiriyara vichaaragalanna naavu oppikondu.... namma niluvanna avarigoo artha maadisidaaga ee gap galu kadime aguttaveno anta nanna Bhaavane...

    Bannada habba... badukinalli saavira rangu tarali... Happy Holi... :)

    ಪ್ರತ್ಯುತ್ತರಅಳಿಸಿ