ಭಾನುವಾರ, ಫೆಬ್ರವರಿ 9, 2014

ಹುಚ್ಚು ಮನಸು

 
ಇಂದೆನ್ನ ಮನಸಿಗೆ ಮುಂದಿನ ನೆನಪಾಗಿ
ನಲಿದಿತ್ತು ನವಿಲಿನಂತೆ, ಗರಿಬಿಚ್ಚಿ ಸೊಗಸಾಗಿ |
ಹಸಿರಿತ್ತು ಹೊನ್ನಿತ್ತು , ಮನವೆಲ್ಲ ಹಿಗ್ಗಿತ್ತು
ಮಳೆಯಲ್ಲಿ ಕುಣಿಕುಣಿದು ದಣಿವೆಲ್ಲ ತಣಿದಿತ್ತು ||

ಕುಣಿವಾಗ ಕಂಡಿತ್ತು ಹಾರಾಡೊ ಗುಬ್ಬಿ
ತಾನೂ ಹಾರಾಡೊ ಮನದಾಸೆ ಉಬ್ಬಿ |
ಬಡಿದಿತ್ತು ರೆಕ್ಕೆಯ, ಹರಡಿತ್ತು ಪುಕ್ಕವ
ಹಾರಲಾಗದೆ ಏರಲಾಗದೆ ಕಂಡಿತ್ತು ನೋವ  ||

ಆಗಲ್ಲಿ ಕಂಡಿತ್ತು ಈಜಾಡೊ ಹಂಸ
ನೀರನ್ನು ಹೊರಚಿಮ್ಮಿ ನಲಿದಾಡೊ ಹಂಸ |
ತಾನೊಮ್ಮೆ ನೀರಲ್ಲಿ ಈಜಾಡೊ ಆಸೆ
ಗರಿಬಿಚ್ಚಿ ನೀರಲ್ಲೇ ನಲಿದಾಡೊ ಆಸೆ ||

ಅತ್ತಿತ್ತ ನೋಡುತ್ತ ಮರೆತಿತ್ತು ಮಳೆಯ
ಸುತ್ತೆಲ್ಲ ಇರುವ ಸೊಗಸಾದ ಕಳೆಯ |
ಮುಂದೆಂದೋ ಇರುವ ಸುಖಕೆಂದು ಹಂಬಲಿಸಿ
ಮರೆತಿತ್ತು ಇಂದಿನ ಸಂತಸದ ಬಗೆಯ ||

ಗುರುವಾರ, ಜನವರಿ 30, 2014

ಪನ್ನೆಯ ಮಾಡಿದರೆ.......





ಅಪ್ಪಾ ನಂಗೆ ಶಾಲೆಲಿ ಎಲ್ಲರೂ ಚಾಳಸ್ತ, ನಾನು ನಾಳೇನೆ ಅನಂತನ ಹತ್ರ ಹೋಗಿ ಜುಟ್ಟ ಕತ್ರಸ್ಗ ಬತ್ತಿ ” ರಾಜರಾಮ ಭಟ್ಟರ ಮಗ ಅನಂತಶಯನ ಶಾಲೆಯಿಂದ ಮನೆಗೆ ಬಂದವನೆ ರಚ್ಚೆ ಹಿಡಿದಿದ್ದ.
“ಸಂಜೆಕಡಿಗೆ ಆ ವಿಷಯ ಎಲ್ಲಾ ಮಾತಾಡಲ್ಲಾಗ ಹೇಳಿ ಎಷ್ಟು ಸಲ ಹೇಳವು ನಿಂಗೆ ?? ಬರೀ ಬಾಯ್ ಮಾತಲ್ಲಿ ಹೇಳಿರೆ ಅರ್ಥನೆ ಆಗ್ತಿಲ್ಲೆ ಕಾಣ್ತು ಅಲ್ದನು, ಎಂತಾ.. ಆನು ಹೇಳಿದಿದ್ನ ನಿಂಗೆ ಜುಟ್ಟ ಬಿಡಲ್ಲೆ ?? ಈಗ ಥೈ ಥೈ ನೆ ಕುಣಿದ್ರೆ ಬಾರ್ಸ್ತಿ ಎರಡಾ “  ರಾಜರಾಮ ಭಟ್ಟರ ಬೆಳ್ಳನೆಯ ಮೂಗು ಕೆಂಪಾಗಿತ್ತು, ಹಣೆಯಲ್ಲಿ ನೂರು ನೆರಿಯಾಗಿತ್ತು.ಅಪ್ಪನ ಸಿಟ್ಟನ್ನು ನೋಡಿ, ಇನ್ನೆಲ್ಲಿ ತನಗೆ ಪೆಟ್ಟು ಬೀಳುವುದೋ ಎಂದು ತೆಪ್ಪಗಾಗಿದ್ದ ಶಯನ.

ಶಯನನಿಗೆ ಆಗಿನ್ನೂ ಏಳು ವರ್ಷ. ಪಕ್ಕದ ಮನೆ ವಿಕಾಸಣ್ಣನ ಉಪನಯನ ನಿಗದಿಯಾಗಿತ್ತು. ಉಪನಯನದ ದಿನ ವಿಕಾಸಣ್ಣನ ತಲೆ ಪೂರ್ತಿ ಬೋಳಿಸಿ ಮಧ್ಯದಲ್ಲೊಂದು ಜುಟ್ಟು ಬಿಟ್ಟಿದ್ದನ್ನು ಶಯನ ನೋಡಿದ್ದೇ ತಡ, ಅಪ್ಪನ ಹತ್ತಿರ ಹೋಗಿ “ಅಪ್ಪಾ , ನನ್ನ ಉಪನಯನದಲ್ಲಿ ನಾನೂ ವಿಕಾಸಣ್ಣನ ಹಾಂಗೆ ಜುಟ್ಟ ಬಿಡ್ತಿ” ಎಂದು ಉಸುರಿದ್ದ. ಶಯನನಿಗೆ ವರುಷ ಏಂಟಾಗಿದ್ದೆ ತಡ, ರಾಜರಾಮ ಭಟ್ಟರು , ಪುರೋಹಿತ ಭಟ್ಟರ ಮನೆಗೆ ಹೋಗಿ ಉಪನಯನದ ದಿನಾಂಕ, ಮುಹೂರ್ತ ನಿಶ್ಚಯಿಸಿ ಬಂದರು. ಉಪನಯನಕ್ಕೆ ಇನ್ನು ಕೆಲವೇ ದಿನ ಇರುವಾಗ ಶಯನನಿಗೆ ತನ್ನ ತಲೆಯ ಚಿಂತೆ ಶುರುವಾಗಿದ್ದು. ತಲೆ ಬೋಳಿಸಿಕೊಂಡು, ಜುಟ್ಟು ಬಿಟ್ಟು ತಾನು ಶಾಲೆಗೆ ಹೇಗೆ ಹೋಗಲಿ ?? “ಶಯನ ಭಟ್ಟ ಕೋಳಿ ಜುಟ್ಟ “ ಎಂದು ಕರೆದರೆ ಏನು ಮಾಡ್ಲಿ ಎಂದೆಲ್ಲಾ ಯೋಚಿಸುವಷ್ಟರಲ್ಲೇ ಉಪನಯನದ ದಿನ ಹತ್ತಿರ ಬಂದಿತ್ತು.
ಪಾಪ ರಾಜರಾಮ ಭಟ್ಟರದ್ದೇನು ತಪ್ಪಿರಲಿಲ್ಲ, ಜುಟ್ಟು ಬಿಡುವುದು ಮಗನ ಆಸೆ ಎಂದೇ ತಿಳಿದಿದ್ದರು. ಜುಟ್ಟು ಬಿಟ್ಟರೆ ತುಂಬಾ ಒಳ್ಳೆಯದೆಂದೂ,ಮಗ ತುಂಬಾ ಬುದ್ದಿವಂತನಾಗುತ್ತಾನೆಂದೂ ಖುಶಿಯಿಂದಿದ್ದರು.ಜುಟ್ಟು ಬಿಟ್ಟರೆ, ಸಂಧ್ಯಾವಂದನೆ, ಜಪ ಮಾಡಿದ ಪುಣ್ಯಗಳೆಲ್ಲಾ ಜುಟ್ಟದಲ್ಲೇ ಸಂಗ್ರಹವಾಗುತ್ತದೆ ಎಂದು ಎಲ್ಲೋ ಓದಿದ ನೆನಪು ಬೇರೆ.ಆದರೆ ಹುಂಬ ಶಯನ, ಏನೋ ಒಂದು ಸಲ ಚಂದ ಕಂಡಿತು ಅಂತ ಹೇಳಿದ್ರೆ, ನಿಜವಾಗಿಯೂ ತಲೆ ಪೂರ್ತಿ ಬೋಳಿಸಿಕೊಳ್ಳಬೇಕು ಎಂದು ಊಹಿಸಿರ್ಲಿಲ್ಲ. ಈಗ ಬೇಡ ಅಂತ ಹೇಳಿದ್ರೆ ಅಪ್ಪ ಎಲ್ಲಿ ಬೈಯ್ಯುತ್ತಾರೋ ಅನ್ನೋ ಭಯ ಬೇರೆ. ಆದದ್ದಾಗಲಿ ಅಂತ ಏನೂ ಹೇಳದೇ ಸುಮ್ಮನಿದ್ದ.

ಅಂತೂ ಉಪನಯನದ ದಿನ ಬಂದಿತ್ತು, ವೈಶಾಖ ಶುದ್ಧ ಪಂಚಮಿ. “ವಿಘ್ನೇಶ್ವರಾನಾ ಬಲಗೊಂಬೆ ssss ಶಿದ್ದಿಗಳಾಗಲಿ ನಮಗೆssss .... “ ಎನ್ನುತ್ತಾ ಕಾರ್ಯಕ್ರಮಗಳನ್ನು ಶುರುಮಾಡಿ, ಬ್ರಹ್ಮಚಾರಿಗಳ ಊಟದ ನಂತರ ಪನ್ನೆ ಕಾರ್ಯಕ್ರಮ. ಪನ್ನೆ ಎಂದರೆ ಶುಭ ಕಾರ್ಯಕ್ಕೆ ಮುನ್ನ ಕೂದಲು ತೆಗೆಸುವುದು. ಪನ್ನೆ ಮಾಡಲು ಅನಂತನೇ ಬಂದಿದ್ದ. ಶಾಸ್ತ್ರಕ್ಕೆಂದು ಅಪ್ಪ ಎರಡು ಕೂದಲು ಕತ್ತರಿಸಿದ ನಂತರ
ಹೆಂಗಸರೆಲ್ಲ “ಪನ್ನೆಯ ಮಾಡಿದರೆ sssss ಅನಂತ ಶಯನಗೆ ಪನ್ನೆಯ ಮಾಡಿದರೆ sssss .............” ಎಂದು ಹಳೆ ಹಾಡು ಹೇಳುತ್ತಾ ಪನ್ನೆಗೆಂದೇ ಹಾಕಿದ್ದ ಕೆಮ್ಮಣ್ಣು-ಶೇಡಿ ರಂಗೋಲಿಯ ಮೇಲೆ ಶಯನನನ್ನು ಕುಳಿಸಿದ್ದರು. ಅನಂತ ತನ್ನ ಶಸ್ತ್ರಾಸ್ತ್ರ ಗಳನ್ನೆಲ್ಲ ತೆಗೆಯುತ್ತಿದ್ದಂತೆ, “ ತಮ್ಮಂಗೆ ಒಂದು ಕನ್ನಡಿ ಕೊಡ್ರೆ “ ಕುಳಿತಲ್ಲಿಂದಲೆ ಅಜ್ಜಿ ಆದೇಶಿಸಿದ್ದರು. ಕನ್ನಡಿ ಹಿಡಿದು ಕುಳಿತಿದ್ದ ಶಯನನಿಗೆ ತನ್ನ ತಲೆ ಬೋಳಾಗುತ್ತಿರುವುದನ್ನು ನೋಡಿ ಎರಡೂ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಆದರೆ ತಾನು ಇಷ್ಟು ದೊಡ್ಡವನದಮೇಲೂ ಅಳುವುದನ್ನು ಯಾರಾದರೂ ನೋಡಿಬಿಟ್ಟರೆ ಅನ್ನೋ ನಾಚಿಕೆಯಿಂದ ಕಷ್ಟಪಟ್ಟು ಅಳುವನ್ನು ತಡೆದುಕೊಂಡಿದ್ದ. ಆದರೂ ಕಣ್ಣಿಂದ ನಾಲ್ಕು ಹನಿ ಕನ್ನಡಿಯ ಮೇಲೆ ಬಿದ್ದಿದ್ದನ್ನು ಶೋಭಾ ಅತ್ತೆ ನೋಡಿದ್ದರು. ಹೆಂಗಸರ ಹಳೆ ಹಾಡು ಇನ್ನೂ ಮುಂದುವರೆದಿತ್ತು....

ಶನಿವಾರ, ಡಿಸೆಂಬರ್ 7, 2013

ಗಂಗಣ್ಣ

      

ಮನೆಯಲ್ಲಿ ಮಾಡಿಸಿದ್ದರು ಹೊಸ ಹಾಸಿಗೆ

ಮಲಗಿದ್ದರೂ ಇಬ್ಬರೂ ಜೊತೆಗೆ

ಒಬ್ಬ ಪುಟ್ಟ  ಮಗು, ಇನ್ನೊಬ್ಬ ಅವನಜ್ಜ



ಸೂರ್ಯ ಇಣುಕಿದ್ದ, ಬೆಳಕು ಹರಿದಿತ್ತು

ಎದ್ದಾಗ ನೋಡಿದರೆ ಎಲ್ಲ ಅದಲುಬದಲಾಗಿತ್ತು

ಅಜ್ಜ ಮಗುವಾಗಿ ಹೋಗಿದ್ದ

ಮಗುವು ಬೆಳೆದು ನಿಂತಿತ್ತು

 ಮಗುವಿನಂಥ ಅಜ್ಜ ಮಲಗೇ ಇದ್ದ

ದೇವರು ಬಾ ಎಂದು  ಕೆರೆದನೆಂದು

ಎಲ್ಲರನು ಅಗಲಿ ಹೊರಟು ಹೋಗಿದ್ದ



ಹೋದರೇನಾಯಿತು ? ....... 
ಸುಂದರ ನೆನಪುಗಳನೆಲ್ಲ
ಇಲ್ಲೇ ಬಿಟ್ಟು ಹೋಗಿದ್ದ.

-      ಸ್ವರಚಿತ


ಶನಿವಾರ, ನವೆಂಬರ್ 2, 2013

ದೀಪಾವಳಿ



ಕಷ್ಟವೆಂಬ ಮಾಯೆ ಓಡೋಡಿ ಬಂದಾಗ
ದುಃಖದ ಛಾಯೆ ಆವರಿಸಿದಾಗ
ಹತ್ತಿರದವರೆಲ್ಲ ಬಹುದೂರ ಸರಿದಾಗ
ಒಬ್ಬಂಟಿತನವು ಕಾಲ್ಮುರಿದು ಕುಳಿತಾಗ
ನಮ್ಮವರೆಂಬುವವರು ನಮ್ಮವರಾಗಲಿಲ್ಲ
ಅಯ್ಯಾ ಎಂದರೆ ಯಾರಿಗೂ ಕೇಳಿಸಲೆ ಇಲ್ಲ
ಎಲ್ಲರಿಗೂ ತಮ್ಮದು ತಮ್ಮವರದೆ ಚಿಂತೆ
ಆಗ ನಮ್ಮೊಳಗಿನ ಕತ್ತಲೆಯನ್ನು ಓಡಿಸಲು
ಮನಸಿನ ದುಗುಡಗಳನು ಮರೆಯಲು
ಹಚ್ಚೋಣ ನಾವು ದೀಪ
ದಿನ ದಿನವೂ ಸಂಭ್ರಮಿಸೋಣ ನಾವು
ಹಿತದ ಬೆಳಕಿನ ಅನುರೂಪ.
ಎಲ್ಲ ಮಿತ್ರರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಷಯಗಳು..  :) :)
                                                                -ಸ್ವರಚಿತ

ಭಾನುವಾರ, ಮಾರ್ಚ್ 24, 2013

ಜನರೇಷನ್ ಗ್ಯಾಪ್







        

 

                       “ಎಷ್ಟು ಹೊತ್ತು ಆ ಕಂಪ್ಯೂಟರ್ ನ ಮುಂದೆ ಕುಳಿತು ಕಾಲಹರಣ ಮಾಡ್ತೀಯಾ, ಓದೋದು ಬರೆಯೋದು ಏನು ಇಲ್ವಾ?.. ಅಯ್ಯೋ ಘಂಟೆ 11 ಆಯ್ತು, ಸುಮ್ನೆ ಟಿ‌ವಿ ಆಫ್ ಮಾಡಿ ಮಲಗು, ರಾತ್ರಿ ಇಡೀ ಹಾಳು ಮೂಳು ಏನೇನೋ ನೋಡಿ ಹಾಳಾಗಿ ಹೋಗ್ತೀಯಾ. ನಾಳೆ ಬೆಳಿಗ್ಗೆ ಸೂರ್ಯ ನೆತ್ತಿಯ ಮೇಲೆ ಬಂದ್ರೂ ಬೆಳಿಗ್ಗೆ ಆಗಲ್ಲ ನಿಂಗೆ “, ಈ ರೀತಿ ಮಾತುಗಳನ್ನು ನಾವು ಎಲ್ಲ ಮನೆಗಳಲ್ಲೂ ಕೇಳಿರ್ತೀವಿ. ಹಾಗೆಯೇ “ ಅಯ್ಯೋ ಆಯ್ತು ಇನ್ನು ಐದೇ ನಿಮಿಷ ಟಿ‌ವಿ ಆಫ್ ಮಾಡಿ ಮಲಗ್ತೀನಿ, ನೀನು ಈಗ ಹೋಗಿ ಮಲಗು.” ಅನ್ನೋ ಮಕ್ಕಳ ಮಾತುಗಳನ್ನು ಕೂಡ. ತನ್ನ favourite ಟಿ‌ವಿ ಶೋ ಶುರು ಆಗೋದೇ ರಾತ್ರಿ 10.30 ಕ್ಕೆ. ಆ ಶೋ ಮುಗಿಸದೆ ಮಲಗುವ ಜಾಯಮಾನವೇ ಅಲ್ಲ ಮಗನದ್ದು. ಮಗ ರಾತ್ರಿ ಹನ್ನೆರಡರವರೆಗೂ ಟಿ‌ವಿ ನೋಡ್ತಾನೆ. ಬೆಳಿಗ್ಗೆ ಘಂಟೆ ಎಂಟಾದ್ರೂ ಏಳಲ್ಲ, ಕೆಟ್ಟು ಹೋಗಿದಾನೆ, ಅನ್ನೋದು ತಂದೆಯ ಗೋಳಾದರೆ, ನಾನು ಎಷ್ಟು ಹೊತ್ತು ಟಿ‌ವಿ ನೋಡಿದ್ರೆ ಇವರಿಗೇನು? ಇವರ ಥರ ಮನೆಹಾಳು ಧಾರಾವಾಹಿಗಳನ್ನೇನು ನಾನು ನೋಡಲ್ವಲ್ಲಾ. ನಾಲಕ್ಕು ದಿನ ರಜೆಯಲ್ಲೂ ಆರಾಮಾಗಿ ಇರೋಕೆ ಬಿಡಲ್ಲ ಎನ್ನುವುದು ಮಕ್ಕಳ ದೂರು.

                     ಇಷ್ಟೆಲ್ಲಾ ವೈಮನಸ್ಸಿಗೆ ತಂದೆ ತಾಯಿ ಮತ್ತು ಮಕ್ಕಳ ನಡುವಿನ ವಯಸ್ಸಿನ ಅಂತರವೇ ಕಾರಣ ಅನ್ನುವುದು ನನ್ನ ಅನಿಸಿಕೆ. ಈ ಅಂತರವನ್ನೇ ಜನರೇಷನ್ ಗ್ಯಾಪ್ ಎನ್ನಬಹುದು. ಜಗತ್ತು ಬೆಳಕಿನ ವೇಗದಲ್ಲಿ ಬದಲಾಗುತ್ತಿದೆ. ಆದರೆ ಆಗುತ್ತಿರುವ ಬದಲಾವಣೆಯನ್ನು ಒಪ್ಪಲು ಯಾರೂ ತಯಾರಿಲ್ಲ. “ನಮ್ಮ ಕಾಲದಲ್ಲಿ ರೇಡಿಯೊ, ಟಿ‌ವಿಗೂ ಗತಿ ಇರಲಿಲ್ಲ, ನಿನಗೆ ಕಂಪ್ಯೂಟರ್, ಮೊಬೈಲ್ ಎಲ್ಲ ಇದ್ದರೂ ಇನ್ನೂ ಬೇಕೆನ್ನುವ ದುರಾಸೆ. ನಾವು ಚಿಕ್ಕವರಿದ್ದಾಗ ಒಂದೊಂದು ಪೈಸೆಗೂ ಎಷ್ಟು ಕಷ್ಟಪಟ್ಟಿದೀವಿ ಅನ್ನೋದು ನಿನಗೆಲ್ಲಿ ಅರ್ಥ ಆಗುತ್ತೆ, ಬಾಳೆ ಹಣ್ಣನ್ನು ಸುಲಿದು ಬಾಯಿಗಿಟ್ಟರೂ ತಿನ್ನಲು ನಿಮಗೆ ಆಲಸ್ಯ.” ಎಂದು ಹಿರಿಯರು ಮಕ್ಕಳನ್ನು ದೂರುತ್ತಾರೆ. ಈಗಿನ ಜಗತ್ತೇ ಮಕ್ಕಳನ್ನು ಅಲಸಿಯನ್ನಾಗಿ ಮಾಡಿದೆ ಅನ್ನುವ ಸತ್ಯವನ್ನು ಒಪ್ಪಲು ಹಿಂಜರಿಯುತ್ತಾರೆ.

                     ಸಂಗೀತಾಸಕ್ತಿಯಿಂದ ಹಿಡಿದು ರಾಜಕೀಯ ಆಸಕ್ತಿಯಲವರೆಗೂ ನಾವು  ಜನರೇಷನ್ ಗ್ಯಾಪ್ ಅನ್ನು ಕಾಣಬಹುದು. ಈಗಿನ ಜನರೇಷನ್ನವರು ಎಲ್ಲ ಸಂಗೀತದಲ್ಲೂ ಆಸಕ್ತಿ ತೋರಿಸುತ್ತಾರೆ. ಆದರೆ ಹೇಳಿದ್ದನ್ನೇ ಬೇರೆ ಬೇರೆ ರಾಗದಲ್ಲಿ, ತಾಳದಲ್ಲೂ ಹೇಳುವ ಶಾಸ್ಟ್ರೀಯ ಸಂಗೀತವೆಂದರೆ ಬೋರು, ಬೋರು. ಗಿಟಾರ್ , ಡ್ರಮ್ ನ ಸಂಗೀತವೆಂದರೆ ಎಲ್ಲಿಲ್ಲದ ಆಸಕ್ತಿ. ಆದರೆ ಹಿರಿಯರ ಪ್ರಕಾರ ಶಾಸ್ಟ್ರೀಯ ಸಂಗೀತವೇ ನಿಜವಾದ ಸಂಗೀತ. ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸಿದರೆ ಸಿಗುವ ಆನಂದವೇ ಬೇರೆ. ಹಾಗೆಯೇ ರಾಜಕೀಯ ವಿಷಯಕ್ಕೆ ಬಂದರೆ, ಸತ್ಯ ಸಜ್ಜನರಾಗಿರುವ ಯುವ ಮುಖಂಡರೆಂದರೆ ಯುವಕರಿಗೆ ಆಸಕ್ತಿ, ತದ್ವಿರುದ್ದವಾಗಿ ಹಿರಿಯ ರಾಜಕಾರಣಿಗಳೆಂದರೆ ಹಿರಿಯರಿಗೆ ದೇವರ ಸಮಾನ.

                    ಈಗ ವೈದ್ಯಕೀಯ ವಿಭಾಗಗಳಲ್ಲಿ  ಏನೇ ಆವಿಷ್ಕರಗಳಾಗಿದ್ದರೂ, ಇದು ಆಯುರ್ವೇದದಲ್ಲಿ ಮೊದಲೇ ಇತ್ತು, ಈಗ  ಮಾಡುತ್ತಿರುವ ಆವಿಷ್ಕರಗಳನ್ನೆಲ್ಲ ನಮ್ಮ ಪೊರ್ವಜರು ಮೊದಲೇ ಮಾಡಿದ್ದರು ಎನ್ನುವ ಮಾತು ಹಿರಿಯರದ್ದು. ಪುಷ್ಪಕ ವಿಮಾನದಂತಹ ಉದಾಹರಣೆಗಳಿಂದ ತಮ್ಮನ್ನು ಅವರು ಸಮರ್ಥಿಸಿಕೊಳ್ಳುತ್ತಾರೆ ಕೂಡ. ಈಗಿನ ಹೊಸ ಆವಿಷ್ಕಾರಗಳ ಉಪಯೋಗವನ್ನು ಅವರು ಧಾರಾಳವಾಗಿ ತೆಗೆದುಕೊಳ್ಳುತ್ತಿದ್ದರೂ ಕೂಡ  ಅದನ್ನು ಒಪ್ಪಲು ಅವರು ತಯಾರಿರುವುದಿಲ್ಲ.

                   “ಪರಿವರ್ತನೆ ಜಗದ ನಿಯಮ” ಎಂಬುದು ಭಗವಂತನ ಮಾತು. ಆದರೆ ಆಗುತ್ತಿರುವ ಪರಿವರ್ತನೆಯನ್ನು ಒಪ್ಪಲು ಹಳೆಯ ಜನರೇಷನ್ ಅವರು ತಯಾರಿಲ್ಲ, ತನ್ನ ಸುತ್ತಲೂ ಎಷ್ಟೆಲ್ಲಾ ಬದಲಾವಣೆಗಳಗುತ್ತಿದ್ದರೂ ಹಳೆಯದನ್ನೇ ಅಪ್ಪಿ ಕೂರಲು ಈಗಿನ ಜನರೇಷನ್ ಅವರು ತಯಾರಿಲ್ಲ.ಈಗ ಎಲ್ಲ ಕೆಲಸಗಳೂ ಬೇಗನೇ ಮುಗಿಯಬೇಕು. ಹಿಂದಿನವರ ತರಹ ಕಾಯ್ದು ಕೂರುವಷ್ಟು ಸಂಯಮ ಈಗಿನವರಿಗಿಲ್ಲ.

                    ಆದರೆ ಎಷ್ಟೇ ತರ್ಕ ಮಾಡಿದರೂ ಹಿರಿಯರಿಗೆ ವಯಸ್ಸಿನ ಜೊತೆ ಜೀವನಾನುಭವವಾಗಿರುತ್ತದೆ. ನಾವು ಈಗ ತಾಂತ್ರಿಕವಾಗಿ, ಬೌದ್ಧಿಕವಾಗಿ ಎಷ್ಟೇ ಮುಂದುವರೆದಿರಬಹುದು ಆದರೆ ಹಿರಿಯರ ಅನುಭವಕ್ಕೆ ನಾವು ತಲೆಬಾಗಲೇಬೇಕು. ಹಾಗೆಯೇ ಹಿರಿಯರೂ ಕೂಡ ಆಗುತ್ತಿರುವ ಪರಿವರ್ತನೆಯನ್ನು ಒಪ್ಪಿಕೊಂಡು, ಹೊಸದನ್ನು ಅಪ್ಪಿಕೊಳ್ಳಬೇಕು. ಆಗಲೇ ಜನರೇಷನ್ ಗ್ಯಾಪ್ ಕಡಿಮೆಯಾಗಲು ಸಾಧ್ಯ. ವಯಸ್ಸಿನ ಅಂತರವು ಮನಸ್ಸಿನ ಅಂತರಕ್ಕೆ ಕಾರಣವಾಗಬಾರದು. “ಹಳೆ ಬೇರು, ಹೊಸ ಚಿಗುರು ಕೂಡಿದರೆ ಮರ ಸೊಬಗು” ಎಂಬ ಡಿ‌ವಿ‌ಜಿ ಅವರ ಮಾತನ್ನು ನಾವು ಅರ್ಥಮಾಡಿಕೊಂಡು ಒಟ್ಟಾಗಿ ಮುನ್ನಡೆಯಬೇಕು.

ಜನರೇಷನ್ ಗ್ಯಾಪ್ ಎಂಬುದೇ ಇಲ್ಲ ಎನ್ನುವವರಿಗೆ ಒಂದು ಉದಾಹರಣೆ ಇಂತಿದೆ:

ಹಳೆ ಜನರೇಷನ್ : ಪಾಪಾ ಕೆಹೆತೇಹೈ ಬಡಾ ನಾಮ್ ಕರೆಗಾ , ಬೇಟಾ ಹಮಾರಾ ಐಸಾ ಕಾಮ್ ಕರೆಗಾ......

ಹೊಸ ಜನರೇಷನ್ : ಡ್ಯಾಡಿ ಮುಝಸೆ ಬೋಲಾ ತು ಗಲ್ತಿ ಹೈ ಮೆರೀ........